ಕ್ಷೇತ್ರದಲ್ಲಿ ಪಕ್ಷೇತರರಿಗೆ ಮಣೆ ಹಾಕದ ಮತದಾರ

ಗುರುವಾರ , ಏಪ್ರಿಲ್ 25, 2019
31 °C
ಪ್ರತಿ ವರ್ಷವೂ ಅದೃಷ್ಟ ಪರೀಕ್ಷೆಗೆ ಇಳಿಯುವ ಸ್ವತಂತ್ರ ಅಭ್ಯರ್ಥಿಗಳು, ಈ ಬಾರಿ ನಾಲ್ವರು ಕಣಕ್ಕೆ

ಕ್ಷೇತ್ರದಲ್ಲಿ ಪಕ್ಷೇತರರಿಗೆ ಮಣೆ ಹಾಕದ ಮತದಾರ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೆ ಕ್ಷೇತ್ರದ ಮತದಾರ ಅವರಿಗೆ ಒಲಿದಿಲ್ಲ.

ಪ್ರತಿ ಚುನಾವಣೆಯಲ್ಲೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೇ ಗೆಲುವು ಧಕ್ಕಿದೆ. 1962ರಿಂದೀಚೆಗೆ ಕ್ಷೇತ್ರದಲ್ಲಿ 14 ಲೋಕಸಭಾ ಚುನಾವಣೆಗಳು ನಡೆದಿವೆ. ಇದುವರೆಗೆ ಕಾಂಗ್ರೆಸ್‌, ಜನತಾದಳ, ಜೆಡಿಯು, ಜೆಡಿಎಸ್‌ ಅಭ್ಯರ್ಥಿಗಳೇ ಗೆದ್ದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು, ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು... ಹೀಗೆ ಬೇರೆ ಬೇರೆ ಉದ್ದೇಶಗಳನ್ನು ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿಗಳಿಗೆ ಕ್ಷೇತ್ರದ ಜನರು ಮಣೆ ಹಾಕಿದ ಉದಾಹರಣೆ ಇಲ್ಲ.

2009ರ ಚುನಾವಣೆಯಲ್ಲಿ ಆರು ಮಂದಿ ಸ್ವ‌ತಂತ್ರವಾಗಿ ಸ್ಪರ್ಧಿಸಿದ್ದರು. ಈ ಪೈಕಿ ಸುಬ್ಬಯ್ಯ ಎಂ. ಎಂಬುವವರು ಗರಿಷ್ಠ 19,984 ಮತಗಳನ್ನು ಪಡೆದಿದ್ದರು. 2014ರಲ್ಲಿ ಮೂವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಇವರಲ್ಲಿ ನಿರ್ಮಲಕುಮಾರಿ ಎಂಬುವವರು ಅತಿ ಹೆಚ್ಚು ಅಂದರೆ 6,604 ಮತಗಳನ್ನು ಗಳಿಸಿದ್ದರು.

ಕಣದಲ್ಲಿ ನಾಲ್ವರು ಪಕ್ಷೇತರರು: ಈ ಬಾರಿ ಕಣದಲ್ಲಿ ಒಟ್ಟು 10 ಮಂದಿ ಇದ್ದಾರೆ. ಈ ಪೈಕಿ ಆನಂದ ಜಿ., ಅಂಬರೀಷ್‌ ಎನ್‌., ಎಂ.ಪ್ರದೀಪ್‍ಕುಮಾರ್ , ಮತ್ತು ಜಿ.ಡಿ. ರಾಜಗೋಪಾಲ್ ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಅಂಬರೀಷ್‌ ಮತ್ತು ರಾಜಗೋಪಾಲ್‌ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದರೆ, ಉಳಿದ ಇಬ್ಬರು ಈಗಾಗಲೇ ಸ್ಪರ್ಧಿಸಿದವರು.

ಜನಸೇವೆಯ ಉದ್ದೇಶ: ನಂಜನಗೂಡು ತಾಲ್ಲೂಕಿನವರಾದ ಆನಂದ ಜಿ. ಅವರು 2014ರ ಲೋಕಸಭಾ ಚುನಾವಣೆಗೆ, 2017ರ ನಂಜನಗೂಡು ವಿಧಾನಸಭಾ ಉಪ ಚುನಾವಣೆ ಹಾಗೂ 2018ರ ವಿಧಾನಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 

‘ಜನ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿದ್ದೇನೆ. ಜನರು ಅವಕಾಶ ಕೊಟ್ಟರೆ ಅವರ ಸೇವೆ ಮಾಡುವೆ. ಕಳೆದ ಬಾರಿ 3,906 ಮತಗಳನ್ನು ಗಳಿಸಿದ್ದೆ. ಈ ಬಾರಿ ಗೆಲುವು ಸಾಧ್ಯವಾಗದಿದ್ದರೂ ಹೆಚ್ಚು ಮತಗಳನ್ನು ಪಡೆದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸೋಲಿನಲ್ಲಿ ಪ್ರಮುಖ ಪಾತ್ರವಹಿಸುವೆ ಎನ್ನುವ ವಿಶ್ವಾಸವಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆನಂದ ಅವರಿಗೆ 7ನೇ ಕ್ರಮಸಂಖ್ಯೆಯನ್ನು ಹಂಚಿಕೆ ಮಾಡಿರುವ ಚುನಾವಣಾ ಆಯೋಗ, ಅನಿಲ ಸಿಲಿಂಡರ್‌ ಅನ್ನು ಚಿಹ್ನೆಯನ್ನಾಗಿ ನೀಡಿದೆ.

ರಾಷ್ಟ್ರೀಯ ಪಕ್ಷಗಳಿಂದ ದೂರ: 8ನೇ ಕ್ರಮ ಸಂಖ್ಯೆ ಮತ್ತು ಹೆಲಿಕಾಪ್ಟರ್‌ ಅನ್ನು ಚಿಹ್ನೆಯನ್ನಾಗಿ ಪಡೆದಿರುವ ಅಂಬರೀಷ್‌ ಎನ್‌. ಅವರು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕೂ ಮೊದಲು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು.

‘ರಾಜ್ಯದ ಹಿತ ಕಾಯದ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಬೇಕು ಎಂಬ ನಿಟ್ಟಿನಲ್ಲಿ ಸ್ಪರ್ಧಿಸಿದ್ದೇನೆ. ಕೋಮುವಾದಿ ಶಕ್ತಿಗಳನ್ನೂ ದೂರ ಇಡುವ ಉದ್ದೇಶವೂ ಸ್ಪರ್ಧಿಸುತ್ತಿರುವ ಹಿಂದಿದೆ. ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಣಕ್ಕಿಳಿದಿಲ್ಲ. ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಮತದಾರರು ಕೈಹಿಡಿಯುತ್ತಾರೆ ಎಂಬ ವಿಶ್ವಾಸದಿಂದ ಮುನ್ನಡೆಯುತ್ತಿದ್ದೇನೆ’ ಎಂದು ಅವರು ಹೇಳಿದರು.

ಖರ್ಚುರಹಿತ ಚುನಾವಣೆ: ‘ಚುನಾವಣೆ ಎಂದರೆ ದೊಡ್ಡ ರಾಜಕೀಯ ಪಕ್ಷಗಳಿಗೆ, ದುಡ್ಡು ಇದ್ದವರಿಗೆ ಮಾತ್ರ ಅಲ್ಲ, ಜನಸಾಮಾನ್ಯರೂ ಸ್ಪರ್ಧಿಸಬಹುದು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ನಿಂತಿದ್ದೇನೆ. 2014ರಲ್ಲಿ ಕರುನಾಡು ಪಕ್ಷದಿಂದ ಸ್ಪರ್ಧಿಸಿದ್ದೆ’ ಎಂದು ಹೇಳುತ್ತಾರೆ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಹನೂರಿನ ಎಂ.ಪ್ರದೀಪ್‌ ಕುಮಾರ್. 

9ನೇ ಕ್ರಮ ಸಂಖ್ಯೆ ಪಡೆದಿರುವ ಅವರಿಗೆ ಕಹಳೆ ಊದುತ್ತಿರುವ ಮನುಷ್ಯನ ಚಿತ್ರವನ್ನು ಚಿಹ್ನೆಯನ್ನಾಗಿ ನೀಡಲಾಗಿದೆ.

‘ನಾನು ದುಡ್ಡು ಖರ್ಚು ಮಾಡುವುದಿಲ್ಲ. ಜನರ ಬಳಿಗೆ ಹೋಗಿ ಪ್ರೀತಿಯಿಂದ ಮಾತನಾಡಿಸಿ ಮತವನ್ನು ಕೇಳುತ್ತೇನೆ. ವೆಚ್ಚರಹಿತ ಚುನಾವಣೆ ನಡೆಯಬೇಕು ಎಂಬುದು ನನ್ನ ಆಶಯ’ ಎಂದು ಪ್ರದೀಪ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು ಅಭಿವೃದ್ಧಿಯ ಗುರಿ: ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಎಚ್‌.ಡಿ.ಕೋಟೆ ತಾಲ್ಲೂಕಿನ  ಜಿ.ಡಿ.ರಾಜಗೋಪಾಲ್‌ ಅವರು ಈ ಹಿಂದೆ ಪಟ್ಟಣ ಪಂಚಾಯಿತಿ, ಪುರಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು.

‘10 ವರ್ಷಗಳ ಕಾಲ ಆಶ್ರಮ ಶಾಲೆಗಳಲ್ಲಿ ಪ್ರಭಾರ ಶಿಕ್ಷಕನಾಗಿ ದುಡಿದಿದ್ದೇನೆ. ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ನಮ್ಮ ತಾಲ್ಲೂಕಿನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಸಂಸದರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕನಿಷ್ಠ 3–4 ಕೈಗಾರಿಕೆಗಳು ಸ್ಥಾಪನೆಯಾದರೆ ತಾಲ್ಲೂಕು ಅಭಿವೃದ್ಧಿಯಾಗುತ್ತದೆ. ಗುಂಡ್ಲುಪೇಟೆ ಪಟ್ಟಣಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ನುಗು ಜಲಾಶಯದಿಂದ ನೀರು ಪೂರೈಸುವುದಕ್ಕೆ ಅವಕಾಶ ಇದೆ. ಈ ಯೋಜನೆಯನ್ನು ಜಾರಿಗೆ ತರಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ರಾಜಗೋಪಾಲ್‌ ಅವರು ಸ್ಪರ್ಧಿಸುತ್ತಿರುವುದಕ್ಕೆ ಕಾರಣಗಳನ್ನು ‘ಪ್ರಜಾವಾಣಿ’ ಮುಂದಿಟ್ಟರು.

‘ಜನರನ್ನು ತಲುಪುವುದಕ್ಕೆ ಆಗುತ್ತಿಲ್ಲ’

ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿಯಿಂದ ಸ್ಪರ್ಧಿಸಿರುವ ಸುಬ್ಬಯ್ಯ (ಕ್ರಮ ಸಂಖ್ಯೆ: 6, ಚಿಹ್ನೆ: ಕಬ್ಬು–ರೈತ) ಅವರಿಗೆ ಏಳೆಂಟು ಬಾರಿ ಚುನಾವಣೆಗೆ ಸ್ಪರ್ಧಿಸಿದ ಅನುಭವವಿದೆ. 

ಕ್ಷೇತ್ರದಲ್ಲಿ ಆರಿಸಿಬಂದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಉದ್ದೇಶವನ್ನು ಕ್ಷೇತ್ರದ ಎಲ್ಲ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೂ ಅವರಲ್ಲಿದೆ. 

‘ರಾಷ್ಟ್ರೀಯ ಪಕ್ಷಗಳು ಇಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಒಂದು ಪಕ್ಷವು ಕೇಂದ್ರದಲ್ಲಿರುವ ಸರ್ಕಾರದ ಮೇಲೆ ದೂರು ಹೇಳಿದರೆ ಮತ್ತೊಂದು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತದೆ ಹೇಳುತ್ತದೆ. ಇದರಿಂದ ಬೇಸತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವೆ’ ಎಂದು ಸುಬ್ಬಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಚುನಾವಣೆಯಲ್ಲಿ ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ನನ್ನ ಆಶಯ ಕೆಲವು ಜನರಿಗಷ್ಟೇ ತಲುಪಿದೆ. ಇಡೀ ಕ್ಷೇತ್ರದ ಜನಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಚುನಾವಣೆಯಲ್ಲಿ ಹಿಂದೆ ಬೀಳುತ್ತಿದ್ದೇನೆ’ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !