ಪಾಕ್‌ ಜತೆ ಸಂಬಂಧ: ಭಾರತಕ್ಕೆ ಸ್ಪಷ್ಟತೆ ಇಲ್ಲ ಎಂದ ವಿದೇಶಾಂಗ ಸಚಿವಾಲಯದ ವಕ್ತಾರ

7
ಮೊಹಮ್ಮದ್‌ ಫೈಸಲ್‌ ಹೇಳಿಕೆ

ಪಾಕ್‌ ಜತೆ ಸಂಬಂಧ: ಭಾರತಕ್ಕೆ ಸ್ಪಷ್ಟತೆ ಇಲ್ಲ ಎಂದ ವಿದೇಶಾಂಗ ಸಚಿವಾಲಯದ ವಕ್ತಾರ

Published:
Updated:

ಇಸ್ಲಾಮಾಬಾದ್‌: ‘ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ತನ್ನ ನೀತಿಯಲ್ಲಿ ಭಾರತಕ್ಕೆ ಸ್ಪಷ್ಟತೆ ಇಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಗುರುವಾರ ಇಲ್ಲಿ ಹೇಳಿದ್ದಾರೆ.

‘ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ ಕಠಿಣವಾದ ಹಾದಿಯಲ್ಲಿ ಸಾಗಿದೆ. ನೀತಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಉಭಯ ದೇಶಗಳ ನಡುವಿನ ಅನೇಕ ವಿಷಯಗಳು ಬಗೆಹರಿಯುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಉಭಯ ದೇಶಗಳ ನಡುವಿನ ಮಾತುಕತೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ಸ್ಪಷ್ಟ ಚಿತ್ರಣದೊಂದಿಗೆ 2018ರ ಸೆಪ್ಟೆಂಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿನ ಆಶಯಕ್ಕೆ ಮೊದಲು ಸಹಮತ ವ್ಯಕ್ತಪಡಿಸಿದ್ದ ಭಾರತ ಮರುದಿನವೇ ತನ್ನ ಮಾತಿನಿಂದ ಹಿಂದೆ ಸರಿಯಿತು’ ಎಂದೂ ಹೇಳಿದರು.

‘ಕರ್ತಾರಪುರ ಕಾರಿಡಾರ್‌ ಯೋಜನೆಯ ಭೂಮಿಪೂಜೆ ಕಾರ್ಯಕ್ರಮಕ್ಕೆ ಭಾರತದ ರಾಜ್ಯವೊಂದರ ಸಚಿವರನ್ನು ಕಳುಹಿಸಲಾಗಿತ್ತು. ಆದರೆ, ಸಚಿವರ ಭೇಟಿ ವೈಯಕ್ತಿಕ ಎಂಬುದಾಗಿ ಮಾರನೇ ದಿನವೇ ಹೇಳಲಾಯಿತು. ಹೀಗಾಗಿ ಏನಾದರೂ ಅಸ್ಪಷ್ಟತೆ, ಗೊಂದಲ ಇದ್ದಿದ್ದೇ ಆದಲ್ಲಿ ಅದು ಭಾರತದ ನಿಲುವಿನಲ್ಲಿದೆ. ಭಾರತವೇ ಈ ಅಸ್ಪಷ್ಟತೆ, ಗೊಂದಲವನ್ನು ನಿವಾರಿಸಿಕೊಳ್ಳಬೇಕು’ ಎಂದೂ ಹೇಳಿದರು.

ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದ ಭಾರತ, ‘ಗಡಿಯಾಚೆಗಿನ
ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ಸಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು.

‘ಅಫ್ಗಾನಿಸ್ತಾನದಲ್ಲಿ ಭಾರತದ ಪಾತ್ರ ಇಲ್ಲ’

‘ಅಮೆರಿಕ ಮತ್ತು ತಾಲಿಬಾನ್‌ ನಡುವೆ ನೇರ ಮಾತುಕತೆಗೆ ಪಾಕಿಸ್ತಾನವೇ ವೇದಿಕೆ ಸಿದ್ಧಪಡಿಸಿದೆ. ಹೀಗಾಗಿ, ಅಫ್ಗಾನಿಸ್ತಾನದಲ್ಲಿನ ಅಶಾಂತಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಈ ಪ್ರಯತ್ನದಲ್ಲಿ ಭಾರತದ ಯಾವುದೇ ಪಾತ್ರ ಇಲ್ಲ’ ಎಂದು ಮೊಹಮ್ಮದ್‌ ಫೈಸಲ್‌ ಹೇಳಿದರು.

‘ಅಫ್ಗಾನಿಸ್ತಾನದಲ್ಲಿನ ಸಂಘರ್ಷಕ್ಕೆ ಆ ದೇಶವೇ ರೂಪಿಸುವ ಶಾಂತಿ ಸೂತ್ರ ಮಾತ್ರ ಪರಿಹಾರ ನೀಡಬಲ್ಲದು. ಈ ಪ್ರಕ್ರಿಯೆಯಲ್ಲಿ ಅಮೆರಿಕ ಮತ್ತು ತಾಲಿಬಾನ್‌ ನಡುವೆ ಮಾತುಕತೆಗಾಗಿ ವೇದಿಕೆಯನ್ನು ಸಿದ್ಧಪಡಿಸುವ ಕೆಲಸವನ್ನು ನಾವು ಮಾಡಿದ್ದೇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !