ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕ್ಸ್‌ಶೀಟ್ ಹೆಸರು ಬದಲಾವಣೆಗೆ ಅವಕಾಶ ಕೊಡಿ: ಸಿಬಿಎಸ್‌ಇಗೆ ಸುಪ್ರೀಂ‌ ಸೂಚನೆ

Last Updated 14 ಅಕ್ಟೋಬರ್ 2020, 4:33 IST
ಅಕ್ಷರ ಗಾತ್ರ

ನವದೆಹಲಿ: 10 ಮತ್ತು 12ನೇ ತರಗತಿಯ ಪ್ರಮಾಣ ಪತ್ರ ಮತ್ತು ಮಾರ್ಕ್‌ಶೀಟ್‌ಗಳಲ್ಲಿ ವಿದ್ಯಾರ್ಥಿಗಳ ಹೆಸರು ಬದಲಾವಣೆಗೆ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸಿಬಿಎಸ್‌ಇಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲಾನ್ ಅವರಿದ್ದ ನ್ಯಾಯಪೀಠವು ಈ ಕುರಿತು ಸಲ್ಲಿಕೆಯಾಗಿರುವ ಹಲವು ಅರ್ಜಿಗಳಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸುವಂತೆ ಸಿಬಿಎಸ್‌ಇಗೆ ಮಂಗಳವಾರ ಸೂಚನೆ ನೀಡಿತು.

‘ಹೆಸರು ಬದಲಾವಣೆಗಾಗಿ ಎಲ್ಲ ವಿದ್ಯಾರ್ಥಿಗಳೂ ಕೋರುತ್ತಿಲ್ಲ. ಕೋರುತ್ತಿರುವ ಕೆಲವರ ಪರಿಸ್ಥಿತಿ, ಇಷ್ಟಗಳನ್ನು ನೀವು ಅರ್ಥಮಾಡಿಕೊಳ್ಳಬೇಕಿದೆ. ಎಷ್ಟಾದರೂ ಅದು ಅವರ ಹೆಸರು ತಾನೆ? ಬೇಕೆನಿಸುವಷ್ಟು ಸಲ ಬದಲಿಸಿಕೊಳ್ಳಲಿ ಬಿಡಿ. ಇಂಥ ವಿವಾದಗಳಿಗೆ ಆಸ್ಪದ ಮಾಡಿಕೊಡಬೇಡಿ, ಇದು ವಕೀಲರಿಗೆ ಅನುಕೂಲ ಮಾಡಿಕೊಡಬಹುದು. ಆದರೆ, ಸಂಸ್ಥೆಗೆ ಅಲ್ಲ’ ಎಂದು ಹೈಕೋರ್ಟ್‌ ಮಾತಿನ ಚಾಟಿ ಬೀಸಿತು.

ಪ್ರಮಾಣಪತ್ರದಲ್ಲಿ ಒಂದೆಡೆ ಹೊಸ ಹೆಸರು ನಮೂದಿಸಲು ಅವಕಾಶ ಮಾಡಿಕೊಡಿ. ವಿತರಣೆಯಾದ ಸಂದರ್ಭದಲ್ಲಿ ಇದ್ದ ಹೆಸರು ಹಾಗೆಯೇ ಇರಲಿ ಎಂದು ನ್ಯಾಯಾಲಯ ಸಲಹೆ ಮಾಡಿತು.

‘ಮಂಡಳಿಯು ಯಾರೊಬ್ಬರ ಗುರುತನ್ನೂ ದೃಢೀಕರಿಸಲು ಆಗುವುದಿಲ್ಲ. ಮೊದಲ ಬಾರಿಗೆ ನೀಡಿರುವ ಮಾಹಿತಿಯನ್ನು ಆಧರಿಸಿ ಪ್ರಮಾಣಪತ್ರ ವಿತರಿಸುತ್ತದೆ’ ಎಂದು ಸಿಬಿಎಸ್‌ಇ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

‘ನೀವು ಹೇಗೂ ಮೊದಲ ಬಾರಿಯ ಗುರುತನ್ನೂ ದೃಢೀಕರಿಸುತ್ತಿಲ್ಲ. ಅಭ್ಯರ್ಥಿಗಳು ಕೊಡುವ ಮಾಹಿತಿ ಆಧರಿಸಿ ಪ್ರಮಾಣಪತ್ರ ನೀಡುತ್ತೀರಿ. ಹೀಗಿರುವಾಗ ಮೊದಲು, ಎರಡು ಅಥವಾ ಮೂರನೇ ಬಾರಿಯೂ ಅವರು ಕೊಡು ಮಾಹಿತಿ ಆಧರಿಸಿಯೇ ಹೆಸರು ಬದಲಿಸಿಕೊಡಿ’ ಎಂದು ನ್ಯಾಯಪೀಠ ಹೇಳಿತು.

ತನ್ನ 10 ಮತ್ತು 12ನೇ ತರಗತಿ ಅಂಕಪಟ್ಟಿಯಲ್ಲಿ ತಾಯಿಯ ಹೆಸರು ಬದಲಿಸಿಕೊಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ ಮಾರ್ಚ್‌ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸಿಬಿಎಸ್‌ಇ ಮೇಲ್ಮನವಿ ಸಲ್ಲಿಸಿದೆ.

ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ತಾಯಿಯು ನಂತರದ ದಿನಗಳಲ್ಲಿ ವಿವಾಹ ವಿಚ್ಛೇದನ ಪಡೆದು, ತನ್ನ ಹೆಸರನ್ನು ಬದಲಿಸಿಕೊಂಡಿದ್ದರು. ಅದೇ ಹೆಸರನ್ನು ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳಲ್ಲಿ ನಮೂದಿಸಬೇಕೆಂದು ಸಿಬಿಎಸ್‌ಇಗೆ ನಿರ್ದೇಶನ ನೀಡಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT