ಲೂಟಿಕೋರರ ರಾಜನನ್ನು ದೆಹಲಿಯಿಂದ ಹೊರಕಳುಹಿಸಿ: ರಾಕೇಶ್ ಟಿಕಾಯತ್

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ದೀರ್ಘಾವಧಿಗೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
‘ಅವರು ಲೂಟಿಕೋರರ ರಾಜ. ಅವರನ್ನು ದೆಹಲಿಯಿಂದ ಹೊರ ಹೋಗುವಂತೆ ಮಾಡಬೇಕಿದೆ’ ಎಂದು ಹನುಮಾನ್ಗಡದ ನೋಹರ್ನಲ್ಲಿ ನಡೆದ ‘ಕಿಸಾನ್ ಮಹಾಪಂಚಾಯತ್’ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೆ ಟಿಕಾಯತ್ ಹೇಳಿದ್ದಾರೆ.
‘ಧ್ವಜ ಹಾಗೂ ದೇಶದ ಮೇಲೆ ಅವರಿಗೆ ಯಾವುದೇ ಪ್ರೀತಿ ಇಲ್ಲ. ಅವರೊಬ್ಬರ ಉದ್ಯಮಿ’ ಎಂದು ಅವರು ಟೀಕಿಸಿದ್ದಾರೆ.
ಓದಿ: ಜನಸಮೂಹಗಳು ಒಟ್ಟುಗೂಡಿದರೆ ಸರ್ಕಾರವೇ ಬದಲಾಗುತ್ತದೆ: ರಾಕೇಶ್ ಟಿಕಾಯತ್
ಭಿಕ್ಷುಕ ಮತ್ತು ಉದ್ಯಮಿಗೆ ದೇಶ ಮತ್ತು ಹೊಲದ ಬಗ್ಗೆ ಪ್ರೀತಿ ಇರುವುದಿಲ್ಲ. ಹಣ ಸರಿಯಾಗಿ ಎಲ್ಲಿ ದೊರೆಯುತ್ತದೆಯೋ ಭಿಕ್ಷುಕರು ಅಲ್ಲಿಗೆ ಹೋಗುತ್ತಾರೆ. ಲಾಭ ಎಲ್ಲಿ ದೊರೆಯುತ್ತದೆಯೋ ಉದ್ಯಮಿ ಅಲ್ಲಿಗೆ ಹೋಗುತ್ತಾನೆ ಎಂದು ಟಿಕಾಯತ್ ಹೇಳಿದ್ದಾರೆ.
ಇದಕ್ಕೂ ಮುನ್ನ ಹರಿಯಾಣದ ಸೋನಿಪತ್ನಲ್ಲಿ ‘ಮಹಾಪಂಚಾಯತ್’ನಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಜನರು ಒಟ್ಟುಗೂಡಿದಾಗ ಸರ್ಕಾರಗಳೇ ಬದಲಾಗುತ್ತವೆ ಎಂದು ಹೇಳಿದ್ದರು. ಕೇವಲ ಜನಸಮೂಹವನ್ನು ಒಟ್ಟುಗೂಡಿಸಿದರೆ ಅದರಿಂದ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಆಗುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಕ್ಕೆ ಈ ರೀತಿ ಟಿಕಾಯತ್ ತಿರುಗೇಟು ನೀಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.