ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಸಚಿವರಾಗಿ 10 ಮಂದಿ ಎಎಪಿ ಶಾಸಕರಿಂದ ಪ್ರಮಾಣವಚನ ಸ್ವೀಕಾರ

Last Updated 19 ಮಾರ್ಚ್ 2022, 17:52 IST
ಅಕ್ಷರ ಗಾತ್ರ

ಚಂಡೀಗಡ:ಭಗವಂತ ಮಾನ್‌ ನೇತೃತ್ವದ ಪಂಜಾಬ್‌ ಸಚಿವ ಸಂಪುಟಕ್ಕೆ ಒಬ್ಬ ಮಹಿಳೆ ಸೇರಿದಂತೆ ಹತ್ತು ಮಂದಿಯನ್ನು ಶನಿವಾರ ಸೇರಿಸಿಕೊಳ್ಳಲಾಗಿದೆ. ರಾಜ್ಯಪಾಲ ಭನ್ವಾರಿಲಾಲ್‌ ಪುರೋಹಿತ್‌ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮವು ಪಂಜಾಬ್‌ ಭವನದಲ್ಲಿ ನಡೆಯಿತು.

ಹರಪಾಲ್‌ ಸಿಂಗ್ ಚೀಮಾ ಮತ್ತು ಗುರ್ಮೀತ್‌ ಸಿಂಗ್‌ ಮೀತ್‌ ಹಯರ್‌ ಅವರನ್ನು ಬಿಟ್ಟರೆ ಉಳಿದ ಎಂಟು ಶಾಸಕರು ಇದೇ ಮೊದಲ ಬಾರಿ ಆಯ್ಕೆ ಆದವರು. ಚೀಮಾ ಅವರು ಮೊದಲಿಗರಾಗಿ ಪ್ರಮಾಣ ಸ್ವೀಕರಿಸಿದರು. ಬಳಿಕ, ಏಕೈಕ ಮಹಿಳಾ ಸಚಿವೆ ಡಾ. ಬಲಜಿತ್‌ ಕೌರ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಹರಭಜನ್‌ ಸಿಂಗ್‌, ಡಾ. ವಿಜಯ್‌ ಸಿಂಗ್ಲಾ, ಲಾಲ್‌ ಚಂದ್‌, ಗುರ್ಮೀತ್ ಸಿಂಗ್‌ ಮೀತ್‌ ಹಯರ್‌, ಕುಲದೀಪ್‌ ಸಿಂಗ್‌ ಧಾಲಿವಾಲ್‌, ಲಾಲ್‌ಜಿತ್‌ ಸಿಂಗ್‌ ಭುಲ್ಲರ್‌, ಬ್ರಹ್ಮಶಂಕರ್‌ ಜಿಂಪ ಮತ್ತು ಹರಜೋತ್ ಸಿಂಗ್‌ ಬೈನ್ಸ್‌ ಅವರು ಸಂಪುಟ ಸೇರಿದ ಇತರರು.

ಮುಖ್ಯಮಂತ್ರಿ ಸೇರಿ 18 ಸಚಿವರಿಗೆ ಸಂಪುಟದಲ್ಲಿ ಅವಕಾಶ ಇದೆ. ಆದರೆ, ಮಾನ್‌ ಅವರು ಏಳು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದಾರೆ.

ಮಾಲ್ವಾ ಪ್ರದೇಶದ ಐವರು, ಮಾಝಾ ಪ್ರದೇಶದ ನಾಲ್ವರು ಮತ್ತು ದೋಅಬಾ ಪ್ರದೇಶದ ಒಬ್ಬರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. ಮೀಸಲು ಕ್ಷೇತ್ರಗಳಲ್ಲಿ ಗೆದ್ದ ನಾಲ್ವರು ಸಚಿವರಾಗಿದ್ದಾರೆ.

ಹರಪಾಲ್‌ ಸಿಂಗ್ ಚೀಮಾ ಅವರು ಎರಡನೇ ಅವಧಿಗೆ ಶಾಸಕರಾದವರು. ದಲಿತ ಸಮುದಾಯದ ನಾಯಕರಾಗಿರುವ ಅವರು ಈ ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ವೃತ್ತಿಯಲ್ಲಿ ಅವರು ವಕೀಲ. ದಿರ್ಬಾ ಕ್ಷೇತ್ರದಲ್ಲಿ ಅವರು ಶಿರೋಮಣಿ ಅಕಾಲಿದಳದ ಗುಲ್ಜಾರ್ ಸಿಂಗ್‌ ಮೂನಕ್‌ ಅವರನ್ನು ಸೋಲಿಸಿದ್ದಾರೆ.

ಬರ್ನಾಲಾದಿಂದ ಎರಡನೇ ಅವಧಿಗೆ ಗೆದ್ದಿರುವ ಗುರ್ಮೀತ್ ಸಿಂಗ್‌ ಮೀತ್ ಹಯರ್‌ ಅವರು ಎಎಪಿ ಯುವ ವಿಭಾಗದ ಅಧ್ಯಕ್ಷ. ಡಾ. ಬಲ್ಜಿತ್‌ ಕೌರ್ ಅವರು ಕಣ್ಣಿನ ವೈದ್ಯೆ. ಎಎಪಿಯ ಮಾಜಿ ಸಂಸದ ಸಂಧು ಸಿಂಗ್‌ ಅವರ ಮಗಳು. ಮುಕ್ತ್‌ಸಾರ್‌ ಸರ್ಕಾರಿ ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆ ನೀಡಿ ಅವರು ರಾಜಕೀಯ ಪ್ರವೇಶಿಸಿದ್ದಾರೆ.

ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪಂಜಾಬ್‌ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಭಾರಿ ಬಹುಮತದಿಂದ ಅಧಿಕಾರ ಹಿಡಿದಿದೆ. 117 ಕ್ಷೇತ್ರಗಳ ಪೈಕಿ 92ರಲ್ಲಿ ಗೆದ್ದಿದೆ.

ಮಾನ್‌ ಅವರ ಮಗಳು ಸೀರತ್‌ ಮಾನ್‌ (21) ಮತ್ತು ಮಗ ದಿಲ್ಶನ್‌ ಮಾನ್‌ (17) ಅವರು ಕಾರ್ಯಕ್ರಮದಲ್ಲಿ ಇದ್ದರು.

ದಿಗ್ಗಜರ ಸೋಲಿಸಿದವರಿಗೆ ಸ್ಥಾನವಿಲ್ಲ
ದಿಗ್ಗಜ ನಾಯಕರನ್ನು ಸೋಲಿಸಿದ ಯಾರೊಬ್ಬರಿಗೂ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಚರಣ್‌ಜಿತ್‌ ಸಿಂಗ್‌ ಚನ್ನಿ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನವಜೋತ್‌ ಸಿಂಗ್ ಸಿಧು, ಶಿರೋಮಣಿ ಅಕಾಲಿದಳದ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಸುಖಬೀರ್‌ ಸಿಂಗ್‌ ಬಾದಲ್‌, ಪಂಜಾಬ್‌ ಲೋಕ ಕಾಂಗ್ರೆಸ್‌ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ಮುಂತಾದವರನ್ನು ಸೋಲಿಸಿದವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ.

25 ಸಾವಿರ ಹುದ್ದೆ ಭರ್ತಿಗೆ ನಿರ್ಧಾರ
ಪ‍ಂಜಾಬ್‌ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 25,000 ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟದ ಮೊದಲ ಸಭೆಯು ಅನುಮೋದನೆ ಕೊಟ್ಟಿದೆ. ಇದರಲ್ಲಿ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 10,000 ಹುದ್ದೆಗಳೂ ಸೇರಿವೆ. ಮಾನ್‌ ಅವರು ವಿಡಿಯೊ ಸಂದೇಶದ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದರು.

ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ ಒಂದು ತಿಂಗಳಲ್ಲಿ ಆರಂಭವಾಗಲಿದೆ. ಪ್ರಣಾಳಿಕೆಯಲ್ಲಿ ನೀಡಿದ ಇತರ ಭರವಸೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದು ಮಾನ್‌ ತಿಳಿಸಿದ್ದಾರೆ.ನಿರುದ್ಯೋಗ ಸಮಸ್ಯೆಯನ್ನುಚುನಾವಣಾ ಪ್ರಚಾರ ಸಂದರ್ಭದಲ್ಲಿ ಎಎಪಿ ಮುಖ್ಯವಾಗಿ ಪ್ರಸ್ತಾಪಿಸಿತ್ತು. ಅಧಿಕಾರಕ್ಕೆ ಬಂದರೆ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ನಿರುದ್ಯೋಗ ನಿವಾರಣೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT