ಸೋಮವಾರ, ನವೆಂಬರ್ 30, 2020
19 °C

ಗುಜರಾತ್‌: ಹತ್ತಿ ಹೊಲಗಳಲ್ಲಿ 1.3 ಲಕ್ಷ ಮಕ್ಕಳಿಂದ ಕೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಗುಜರಾತ್‌ನಲ್ಲಿ ಬೀಜೋತ್ಪಾದನೆಗೆ ಸಂಬಂಧಿಸಿದ ಹತ್ತಿ ಹೊಲಗಳಲ್ಲಿ 1.3 ಲಕ್ಷ ಮಕ್ಕಳು ದುಡಿಯುತ್ತಿದ್ದಾರೆ. ಈ ಬಾಲಕಾರ್ಮಿಕರ ಪೈಕಿ ಬಹುತೇಕ ಮಕ್ಕಳು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಅಹಮದಾಬಾದ್‌ ಮೂಲದ ಎನ್‌ಜಿಒ ಸೆಂಟರ್‌ ಫಾರ್ ಲೇಬರ್‌ ರಿಸರ್ಚ್‌ ಆ್ಯಂಡ್ ಆ್ಯಕ್ಷನ್ ಹೇಳಿದೆ.

‘ಎನ್‌ಜಿಒ ಪ್ರಕಟಿಸಿರುವ ವರದಿ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ಕಳುಹಿಸಲಾಗಿದೆ. ತಂಡಗಳು ನೀಡುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಕಾರ್ಮಿಕ ಇಲಾಖೆಯ ಉಪ ಆಯುಕ್ತ ಎಂ.ಸಿ.ಕರಿಯಾ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಬೀಜೋತ್ಪಾದನೆಗಾಗಿ ಹತ್ತಿ ಕೃಷಿ ಕೈಗೊಂಡವರು ತಮ್ಮ ಹೊಲಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಹಳ ಕಡಿಮೆ ಕೂಲಿ ನೀಡುತ್ತಾರೆ. ಹೀಗಾಗಿ ಇಂಥ ಕೃಷಿಕರು ಕೂಲಿ ಕೆಲಸಕ್ಕೆ ಮಕ್ಕಳಿಗೇ ಆದ್ಯತೆ ನೀಡುತ್ತಾರೆ’ ಎಂದು ಎನ್‌ಜಿಒ ಪ್ರತಿನಿಧಿ ಸುಧೀರ್‌ ಕಟಿಯಾರ್‌ ಹೇಳಿದರು.

‘ಈ ಹೊಲಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ದಿನಕ್ಕೆ ₹ 150 ಕೂಲಿ ನೀಡಲಾಗುತ್ತದೆ. ಈ ಮೊತ್ತ ಪಡೆದು ದುಡಿಯಲು ವಯಸ್ಕ ಕೂಲಿಕಾರ್ಮಿಕ ಒಪ್ಪುವುದಿಲ್ಲ’ ಎಂದೂ ಕಟಿಯಾರ್‌ ಹೇಳಿದರು.

‘ಈ ಮೊದಲು ಉತ್ತರ ಗುಜರಾತ್‌ನಲ್ಲಿ ಬಾಲಕಾರ್ಮಿಕರ ಸಂಖ್ಯೆ ಅಧಿಕವಾಗಿತ್ತು. ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಬೀಜೋತ್ಪಾದನೆ ಕಂಪನಿಗಳ ವಿರುದ್ಧ 10 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿತು. ಹೀಗಾಗಿ ಹತ್ತಿ ಬೀಜೋತ್ಪಾದನೆಯ ಕಂಪನಿಗಳು ಬುಡಕಟ್ಟು ಜನರೇ ಹೆಚ್ಚಾಗಿರುವ ಬಾನಸ್‌ಕಂಠ, ಸಬರ್‌ಕಂಠ, ಅರ್ವಲ್ಲಿ, ಮಹಿಸಾಗರ್ ಹಾಗೂ ಛೋಟಾ ಉದೇಪುರ ಜಿಲ್ಲೆಗಳಿಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಸ್ಥಳಾಂತರಿಸಿದವು’ ಎಂದೂ ವಿವರಿಸಿದರು.  

‘ಬೀಜೋತ್ಪಾದನೆ ನಿರತ ಕಂಪನಿಗಳು ಸ್ಥಳಾಂತರಗೊಂಡಿದ್ದರಿಂದ ದಕ್ಷಿಣ ರಾಜಸ್ಥಾನದಿಂದ ಮಕ್ಕಳ ಕಳ್ಳಸಾಗಣೆ ಗಮನಾರ್ಹವಾಗಿ ಕಡಿಮೆಯಾಯಿತು. ಆದರೆ, ಗುಜರಾತ್‌ನ ದಕ್ಷಿಣ ಭಾಗದಲ್ಲಿ ಬುಡಕಟ್ಟು ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಹೆಚ್ಚಾಗಿದೆ’ ಎಂದು ವಿಷಾದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು