ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್‌ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಯೋಧ ನಿಧನ

Last Updated 19 ಡಿಸೆಂಬರ್ 2022, 11:37 IST
ಅಕ್ಷರ ಗಾತ್ರ

ಜೋಧ್‌ಪುರ/ನವದೆಹಲಿ: 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ್ದ ವೀರ ಸೇನಾನಿ, ಲ್ಯಾನ್ಸ್‌ ನಾಯಕ್‌ ಭೈರೋನ್ ಸಿಂಗ್ ರಾಥೋರ್‌ (81) ಅವರು ಅನಾರೋಗ್ಯದಿಂದಾಗಿ ಸೋಮವಾರ ಜೋಧ್‌ಪುರದಲ್ಲಿ ನಿಧನರಾದರು.

‘ವೀರ ಸೇನಾನಿ ಇಂದು ಜೋಧ್‌ಪುರದ ಎಐಐಎಂಎಸ್‌ನಲ್ಲಿ ತನ್ನ ಕೊನೆ ಉಸಿಯುಸಿರೆಳೆದರು’ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಟ್ವಿಟರ್‌ನಲ್ಲಿ ತಿಳಿಸಿದೆ.

1987ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ ರಾಥೋರ್‌ ಅವರು ಜೋಧ್‌ಪುರದಿಂದಸುಮಾರು 120 ಕಿ.ಮೀ. ದೂರದ ಸೋಲಂಕಿಯಾಟಲಾ ಗ್ರಾಮದಲ್ಲಿ ನೆಲೆಸಿದ್ದರು.

ಥಾರ್‌ ಮರುಭೂಮಿಯ ಲೊಂಗೆವಾಲಾ ಸೇನಾ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ರಾಥೋರ್‌ ಅವರು ಶತ್ರು ಸೈನಿಕರನ್ನು ಸದೆಬಡಿಯಲು ತೋರಿದ ಸಾಹಸ, ಶೌರ್ಯವನ್ನು ಬಿಂಬಿಸುವ, ನಟ ಸುನೀಲ್‌ ಶೆಟ್ಟಿ ಅಭಿನಯದ ಬಾಲಿವುಡ್‌ ‘ಬಾರ್ಡರ್‌’ ಚಿತ್ರ ಯಶಸ್ಸು ಪಡೆದಿತ್ತು.

ಪಂಜಾಬ್‌ ರೆಜಿಮೆಂಟ್‌ಗೆ ಸೇರಿದ ರಾಥೋರ್‌, ಲೊಂಗೆವಾಲಾದಲ್ಲಿ ನಿಯೋಜನೆಗೊಂಡಿದ್ದ 23 ಸೈನಿಕರ ಬಿಎಸ್‌ಎಫ್‌ನ ಸಣ್ಣ ಘಟಕದಲ್ಲಿ ಒಬ್ಬರಾಗಿದ್ದರು. 1971ರ ಡಿಸೆಂಬರ್‌ 5ರಂದು ಪಾಕ್‌ ಸೈನಿಕರಿಂದ ತಮ್ಮ ತುಕಡಿಯ ಒಬ್ಬ ಯೋಧ ಕೊಲ್ಲಲ್ಪಟ್ಟಾಗ ರಾಥೋರ್‌ ಅವರು ಲೈಟ್‌ ಮೆಷಿನ್ ಗನ್‌ನಿಂದ ಶತ್ರು ಸೈನಿಕರ ಮೇಲೆ ಗುಂಡಿನ ಮಳೆಗರೆದು, ಪಾಕ್‌ ಸೇನೆಗೆ ಅಪಾರ ಸಾವು– ನೋವು ಉಂಟು ಮಾಡಿದ್ದರು. ಅವರ ಈ ಶೌರ್ಯಕ್ಕೆ ಸೇನಾ ಪದಕ ನೀಡಿ ಸೇನೆ ಗೌರವಿಸಿದೆ.

ರಾಥೋರ್‌ ಅವರ ಪುತ್ರ ಸವಾಯಿ ಸಿಂಗ್‌ ಅವರು ಕಳೆದ ಶನಿವಾರ ‘ತಮ್ಮ ತಂದೆಯವರನ್ನುಡಿ.14ರಂದು ಜೋಧ್‌ಪುರದ ಏಮ್ಸ್‌ಗೆ ದಾಖಲಿಸಲಾಗಿದೆ. ಪಾಕ್‌ ವಿರುದ್ಧದ ಯುದ್ಧದ 51ನೇ ವಾರ್ಷಿಕೋತ್ಸವಕ್ಕೆ ಎರಡು ದಿನಗಳ ಮೊದಲು, ಅವರ ಆರೋಗ್ಯ ತೀವ್ರ ಹದಗೆಟ್ಟಿತು. ತಂದೆಯವರಿಗೆ ಮಿದುಳಿನ ಪಾರ್ಶ್ವವಾಯು ಆಗಿರುವುದಾಗಿ ವೈದ್ಯರು ಹೇಳಿದ್ದರು.ಕಳೆದ ಕೆಲವು ದಿನಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT