ಸೋಮವಾರ, ಏಪ್ರಿಲ್ 19, 2021
25 °C

2008ರ ಬೆಂಗಳೂರು ಸ್ಫೋಟ ಪ್ರಕರಣ | ಮದನಿ ‘ಅಪಾಯಕಾರಿ’ ವ್ಯಕ್ತಿ -ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ 2008ರಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಕೇರಳದ ಪೀಪಲ್ ಡೆಮಾಕ್ರಟಿಕ್ ಪಕ್ಷದ ಮುಖಂಡ ಅಬ್ದುಲ್ ನಜೀರ್ ಮದನಿ ಒಬ್ಬ ‘ಅಪಾಯಕಾರಿ’ ವ್ಯಕ್ತಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕರೆದಿದೆ.

ಜಾಮೀನು ಷರತ್ತುಗಳನ್ನು ಸಡಿಲಿಸುವ ಮೂಲಕ ಕೇರಳಕ್ಕೆ ಭೇಟಿ ನೀಡಲು ಮತ್ತು ಅಲ್ಲೇ ವಾಸ್ತವ್ಯ ಹೂಡಲು ಅವಕಾಶ ಕೋರಿ ಮದನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ, ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು.

ಅಧೀನ ನ್ಯಾಯಾಲಯದಲ್ಲಿ ಸದ್ಯ ನ್ಯಾಯಾಧೀಶರೇ ಇಲ್ಲದ್ದರಿಂದ ವಿಚಾರಣೆ ನಡೆಯುತ್ತಿಲ್ಲ. ಈಗಾಗಲೇ ಜಾಮೀನಿನ 7 ವರ್ಷಗಳ ಅವಧಿಯನ್ನು ಬೆಂಗಳೂರಿನಲ್ಲಿ ಕಳೆಯಲಾಗಿದೆ. ಕೋವಿಡ್–-19 ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಮದನಿ ಪರ ವಕೀಲರು ಕೋರಿದರು.

ಬೆಂಗಳೂರಿನಲ್ಲಿ ಮನೆಯ ಬಾಡಿಗೆ ಅಧಿಕವಾಗಿದ್ದು, ಆರೋಪಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ. ಅಲ್ಲದೆ, ನ್ಯಾಯಪೀಠವು ಈ ಹಿಂದೆ 3 ಬಾರಿ ಕೇರಳಕ್ಕೆ ಭೇಟಿ ನೀಡಲು ಅನುಮತಿ ನೀಡುವ ಮೂಲಕ ಜಾಮೀನು ಷರತ್ತುಗಳನ್ನು ಸಡಿಲಿಸಿತ್ತು ಎಂದು ಅವರು ಹೇಳಿದರು.

‘ಬೆಂಗಳೂರು ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಿ 2014ರ ಜುಲೈ 11ರಂದು ಮದನಿಗೆ ಜಾಮೀನು ಮಂಜೂರು ಮಾಡಲಾದ ಪೀಠದಲ್ಲಿ ನಾನೂ ಇದ್ದೆ. ಆತ ಒಬ್ಬ ಅಪಾಯಕಾರಿ ವ್ಯಕ್ತಿ’ ಎಂದು ಮುಖ್ಯ ನ್ಯಾಯಮೂರ್ತಿ ಇದೇ ಸಂದರ್ಭ ಹೇಳಿದರು.

ಪ್ರಸ್ತುತ ನ್ಯಾಯಪೀಠದ ಭಾಗವಾಗಿರುವ ನ್ಯಾಯಮೂರ್ತಿ ವಿ. ರಾಮ ಸುಬ್ರಮಣಿಯನ್ ಅವರು ಈ ಹಿಂದೆ ಅರ್ಜಿದಾರರ ಪರ ವಾದ ಮಂಡಿಸಿದ್ದರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿಚಾರಣೆಯನ್ನು ಒಂದು ವಾರದ ಅವಧಿಗೆ ಮುಂದೂಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು