ಚುನಾವಣೆ ನಿಗದಿಯಾಗುವವರೆಗೆ ಪ್ರಚಾರ ಆರಂಭಿಸದಿರಿ: ರಾಜಕೀಯ ಪಕ್ಷಗಳಿಗೆ ರೈತರ ಮನವಿ

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುವವರೆಗೆ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಕ್ರಮಗಳನ್ನು ನಡೆಸಬಾರದು. ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ರಾಜಕೀಯ ಕಾರ್ಯಕ್ರಮಗಳಿಂದ ತೊಂದರೆಯಾಗಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್ ತಿಳಿಸಿದ್ದಾರೆ.
ಈ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಹೇಳಿವೆ ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಂಗ್, ಚುನಾವಣೆ ದಿನಾಂಕ ನಿಗದಿಯಾಗುವವರೆಗೆ ಪ್ರಚಾರಗಳನ್ನು ಮುಂದೂಡುವಂತೆ ರಾಜಕೀಯ ಪಕ್ಷಗಳನ್ನು ಕೇಳಿದ್ದೇವೆ. ಈ ವಿಚಾರವಾಗಿ ತಮ್ಮ ಹೈಕಮಾಂಡ್‌ಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಕಾಂಗ್ರೆಸ್ ಮತ್ತು ಎಸ್‌ಎಡಿ ತಿಳಿಸಿವೆʼ ಎಂದು ಹೇಳಿದ್ದಾರೆ.
ʼನಾವು ಪಂಜಾಬ್‌ನಲ್ಲಿ ಶಾಂತಿಯುತ ವಾತಾವರಣವನ್ನು ಬಯಸುತ್ತೇವೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಮ್ಮ ಎಲ್ಲಾ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ತಿಳಿಸಿದ್ದಾರೆʼ ಎಂದಿದ್ದಾರೆ.
ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಿಧು ಹಾಗೂ ಕಾಂಗ್ರೆಸ್‌ನ ಹಲವು ನಾಯಕರು ಇಲ್ಲಿ ರೈತ ಒಕ್ಕೂಟದ ಪ್ರತಿನಿಧಿಗಳನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಸಭೆ ಬಳಿಕ ಟ್ವೀಟ್ ಮಾಡಿರುವ ಸಿಧು, ʼಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಸಕಾರಾತ್ಮಕ ಮಾತುಕತೆ ನಡೆಸಿದ್ದೇವೆ. ಮುಂದಿನ ಹಾದಿಯ ಬಗ್ಗೆ ಚರ್ಚಿಸಲಾಗಿದೆʼ ಎಂದು ಬರೆದುಕೊಂಡಿದ್ದಾರೆ.
ಪಂಜಾಬ್‌ನ ಸುಮಾರು 32 ರೈತ ಸಂಘಟನೆಗಳು ಬಿಜೆಪಿ ಹೊರತು ಪಡಿಸಿ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಈಗಾಗಲೇ ಚಂಡೀಗಢದಲ್ಲಿ ಸಭೆ ನಡೆಸಿ ಚುನಾವಣಾ ಪ್ರಚಾರ ಅಭಿಯಾನಗಳನ್ನು ಮುಂದೂಡುವಂತೆ ಕೋರಿವೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ವರ್ಷ ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ನಾಯಕರೊಂದಿಗೆ ಕೇಂದ್ರವು ಹಲವು ಸುತ್ತಿನ ಮಾತುಕತೆ ನಡೆಸಿದೆಯಾದರೂ ಸಮಸ್ಯೆ ಬಗೆಹರಿದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.