ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಯಲ್ಲಿ 30 ಲಕ್ಷ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ಕಳುಹಿಸಿದ ಬಿಜೆಪಿ!

Last Updated 28 ಅಕ್ಟೋಬರ್ 2021, 9:37 IST
ಅಕ್ಷರ ಗಾತ್ರ

ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವುದಕ್ಕಾಗಿ 30 ಲಕ್ಷ ಬೂತ್‌ ಮಟ್ಟದ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆಗಳನ್ನು ಕಳುಹಿಸಿಕೊಡಲಾಗಿದೆ.

ರಾಜ್ಯದಲ್ಲಿ 1.63 ಲಕ್ಷ ಮತಗಟ್ಟೆಗಳಿದ್ದು (ಬೂತ್‌), 1.5 ಲಕ್ಷ ಮತಗಟ್ಟೆಗಳಲ್ಲಿ 20–20 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

‘ನಮ್ಮ ಬಿಜೆಪಿ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಅದರಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಪ್ರಮುಖ ಕೊಂಡಿಯಾಗಿದ್ದಾರೆ. ಅವರೆಲ್ಲರಿಗೂ ಪ್ರತಿ ವರ್ಷ ದೀಪಾವಳಿಯ ಹಬ್ಬದಂದು ಉಡುಗೊರೆ ನೀಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಈ ಬಾರಿ 30 ಲಕ್ಷಕ್ಕೂ ಹೆಚ್ಚು ಬೂತ್ ಕಾರ್ಯಕರ್ತರಿಗೆ ಉಡುಗೊರೆಗಳನ್ನು ಕಳುಹಿಸಿದೆ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಬಹದ್ದೂರ್ ಪಾಠಕ್ ಹೇಳಿದರು.

ಉಡುಗೊರೆಯ ಪ್ರತಿ ಬಾಕ್ಸ್‌ನಲ್ಲಿ ಮನೆಯ ಬಾಗಿಲಿಗೆ ಕಟ್ಟುವ ತೋರಣ ಮತ್ತು ಕಮಲದ ಆಕಾರದಲ್ಲಿರುವ ಮಣ್ಣಿನ ಹಣತೆಯಿದೆ. ಈ ಉಡುಗೊರೆಯನ್ನು ಬೂತ್ ಸಮಿತಿಗಳ ಪ್ರತಿ ಸದಸ್ಯರಿಗೂ ನೀಡಲಾಗುತ್ತಿದೆ.

‘ಈ ಉಡುಗೊರೆಗಳು ಚುನಾವಣಾ ಪ್ರಚಾರದ ಭಾಗವೇ‘ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಠಕ್, ‘ನಮ್ಮ ಪಕ್ಷ 2022ರ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಿದೆ. ಸಹಜವಾಗಿ ಎಲ್ಲ ಜನರ ಬಳಿಗೆ ಈ ವಿಧಾನದಲ್ಲಿ ಚುನಾವಣಾ ವಿಷಯವನ್ನು ತಲುಪಿಸುತ್ತಿದ್ದೇವೆ‘ ಎಂದು ಹೇಳಿದರು.

‘ಜನರು ಕಮಲದ ದೀಪವನ್ನು ಬೆಳಗಿಸಿದಾಗ, ಕತ್ತಲೆ ಮಾಯವಾಗುವ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ, ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾರಂಭಿಸಿರುವ ಅಭಿವೃದ್ಧಿ ಯೋಜನೆಗಳು ಬಲಗೊಳ್ಳುತ್ತವೆ‘ ಎಂದು ಪಾಠಕ್ ಹೇಳಿದರು.

2017ರ ವಿಧಾನಸಭಾ ಚುನಾವಣೆಯ ವೇಳೆ, ಆಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಗೃಹ ಸಚಿವ ಅಮತ್ ಶಾ ಅವರು ಈ ಬೂತ್ ನಿರ್ವಹಣಾ ಸೂತ್ರವನ್ನು ಅನುಷ್ಠಾನಗೊಳಿಸಿದ್ದರು. ಅಷ್ಟೇ ಅಲ್ಲ, ಬೂತ್‌ ಮಟ್ಟದ ಕಾರ್ಯಕರ್ತರ ಮನೆಗಳಿಗೂ ಭೇಟಿ ನೀಡಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ, ಬೂತ್ ಮಟ್ಟದ ಸಭೆಗಳಲ್ಲಿ ಅವರು ಭಾಗವಹಿಸಿದ್ದರು.

ಅಮಿತ್ ಶಾ ಅವರು ಶುಕ್ರವಾರ ಲಖನೌಗೆ ಭೇಟಿ ನೀಡಲಿದ್ದು, ಕಾರ್ಯಕರ್ತರನ್ನು ಚುನಾವಣೆಗಾಗಿ ಕೆಲಸ ಮಾಡುವಂತೆ ಹುರಿದುಂಬಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT