ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ವ್ಯಕ್ತಿಯ ಕಿಡ್ನಿಯಲ್ಲಿದ್ದವು 206 ಕಲ್ಲುಗಳು!

Last Updated 20 ಮೇ 2022, 14:09 IST
ಅಕ್ಷರ ಗಾತ್ರ

ಹೈದರಾಬಾದ್: ಅಪರೂಪದ ವಿದ್ಯಮಾನವೊಂದರಲ್ಲಿ ವ್ಯಕ್ತಿಯೊಬ್ಬರ ಕಿಡ್ನಿಯಲ್ಲಿದ್ದ (ಮೂತ್ರಪಿಂಡ) 206 ಕಲ್ಲುಗಳನ್ನು ಹೈದರಾಬಾದ್‌ನ ‘ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ’ಯ ವೈದ್ಯರು ಹೊರ ತೆಗೆದಿದ್ದಾರೆ.

ನಲ್ಗೊಂಡಾ ನಿವಾಸಿ 55 ವರ್ಷ ವಯಸ್ಸಿನ ವೀರಮಲ್ಲ ರಾಮಲಕ್ಷ್ಮಣಯ್ಯ ಅವರು ಸೊಂಟದ ಎಡ ಭಾಗದಲ್ಲಿ ಆರು ತಿಂಗಳುಗಳಿಂದ ವಿಪರೀತ ನೋವು ಅನುಭವಿಸುತ್ತಿದ್ದರು. ಬೇಸಿಗೆಯಲ್ಲಿ ಅದು ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಅವರು ಏಪ್ರಿಲ್ 22ರಂದು ಹೈದರಾಬಾದ್‌ನ ‘ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ’ಯ ವೈದ್ಯರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಅಷ್ಟರವರೆಗೆ ಸ್ಥಳೀಯ ವೈದ್ಯರಿಂದ ಔಷಧ ಪಡೆಯುತ್ತಿದ್ದರಾದರೂ ಅದರಿಂದ ತಾತ್ಕಾಲಿಕ ಪರಿಹಾರವಷ್ಟೇ ಅವರಿಗೆ ದೊರೆತಿತ್ತು.

ರಾಮಲಕ್ಷ್ಮಣಯ್ಯ ಅವರನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗೆ ಒಳಪಡಿಸಿ ಪ್ರಾಥಮಿಕ ಪರೀಕ್ಷೆ ನಡೆಸಿದಾಗ ಕಿಡ್ನಿಯಲ್ಲಿ ಹಲವು ಕಲ್ಲುಗಳು ಇರುವುದು ಗಮನಕ್ಕೆ ಬಂತು. ನಂತರ ಸಿಟಿ ಸ್ಕ್ಯಾನ್ ಮಾಡಿದಾಗ ಅದು ದೃಢಪಟ್ಟಿತು ಎಂದು ‘ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ’ಯ ಯೂರಾಲಜಿಸ್ಟ್‌ ಡಾ. ಪೂಲ ನವೀನ್ ಕುಮಾರ್ ಹೇಳಿದ್ದಾರೆ.

‘ರೋಗಿಯ ತಪಾಸಣೆ ನಡೆಸಿ ಕೀಹೋಲ್ ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸಲಾಯಿತು. ಶಸ್ತ್ರಚಿಕಿತ್ಸೆಯು ಸುಮಾರು 1 ಗಂಟೆ ನಡೆದಿದ್ದು, 206 ಕಲ್ಲುಗಳನ್ನು ಹೊರತೆಗೆಯಲಾಯಿತು. ಆ ಬಳಿಕ ರೋಗಿಯು ಚೇತರಿಸಿಕೊಂಡು ಎರಡನೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಈ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಡಾ. ಪೂಲ ನವೀನ್ ಕುಮಾರ್ ಅವರಿಗೆ ತಜ್ಞ ವೈದ್ಯರಾದ ಡಾ. ವೇಣು ಮನ್ನೆ, ಡಾ. ಮೋಹನ್ ಹಾಗೂ ಇತರ ಸಿಬ್ಬಂದಿ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT