ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡಮಾನ್‌ನ 21 ದ್ವೀಪಗಳಿಗೆ ವೀರ ಯೋಧರ ಹೆಸರು: ಕೇಂದ್ರ ಸರ್ಕಾರ

Last Updated 2 ಡಿಸೆಂಬರ್ 2022, 14:23 IST
ಅಕ್ಷರ ಗಾತ್ರ

ಪೋರ್ಟ್‌ ಬ್ಲೇರ್‌: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಜನವಸತಿ ಇಲ್ಲದ 21 ದ್ವೀಪಗಳಿಗೆ ದೇಶದ ಅತ್ಯುತ್ತಮ ಸೇನಾ ಪ್ರಶಸ್ತಿಯಾದ ಪರಂವೀರ ಚಕ್ರ ಪ್ರಶಸ್ತಿ ಸ್ವೀಕರಿಸಿದ ಸೈನಿಕರ ಹೆಸರನ್ನು ಕೇಂದ್ರ ಸರ್ಕಾರ ಹೆಸರಿಸಿದೆ.

ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿ 16 ದ್ವೀಪಗಳು ಹಾಗೂ ದಕ್ಷಿಣ ಅಂಡಮಾನ್‌ನಲ್ಲಿ 5 ದ್ವೀಪ ಸೇರಿ ಒಟ್ಟು 21 ದ್ವೀಪಗಳಿಗೆ ನಾಮಕರಣ ಮಾಡಲಾಗಿದ್ದು, ಕೇಂದ್ರದ ಈ ನಡೆಯನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಂಸದ ಕುಲದೀಪ್‌ ರಾಯ್ ಶರ್ಮಾ ಸ್ವಾಗತಿಸಿದ್ದಾರೆ.

ವೀರ ಸೈನಿಕರಿಗೆ ಗೌರವ ಸಲ್ಲಿಸಲು ಕೇಂದ್ರ ತೆಗೆದುಕೊಂಡ ನಿರ್ಧಾರ ಸಂತಸ ತಂದಿದೆ. ಶಾಲಾ ಮಕ್ಕಳಿಗಾಗಿ ಒಂದು ಸಣ್ಣ ಕೈಪಿಡಿ ಪ್ರಕಟಿಸುವಂತೆ ಆಡಳಿತವನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿರುವ ‘ಐಎನ್‌ಎಎನ್‌370’ ಸಂಖ್ಯೆಯ ಮೊದಲ ಜನವಸತಿಯಿಲ್ಲದ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಇಡಲಾಯಿತು. ಈಗ ಇದನ್ನು 'ಸೋಮನಾಥ್ ದ್ವೀಪ' ಎಂದು ಕರೆಯಲಾಗುವುದು. ಅವರು ಪರಮವೀರ ಚಕ್ರದ ಮೊದಲ ಪುರಸ್ಕೃತರು. 1947ರ ನವೆಂಬರ್ 3 ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ತಡೆಯುವ ಕಾರ್ಯಾಚರಣೆಯಲ್ಲಿ ಶರ್ಮಾ ಅವರು ಪ್ರಾಣ ಕಳೆದುಕೊಂಡರು. ಬದ್ಗಾಮ್ ಕದನದ ಸಮಯದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯನ್ನು ನೀಡಲಾಗಿತ್ತು.

‘ಐಎನ್‌ಎಎನ್‌308’ ಸಂಖ್ಯೆಯ ಮತ್ತೊಂದು ಜನವಸತಿಯಿಲ್ಲದ ದ್ವೀಪವನ್ನು 'ಕರಮ್ ಸಿಂಗ್ ದ್ವೀಪ' ಎಂದು ಹೆಸರಿಸಲಾಗಿದೆ.ಅದೇ ರೀತಿ, ಮೇಜರ್ ರಾಮ ರಘೋಬ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿಯ ಹವಾಲ್ದಾರ್ ಮೇಜರ್ ಪೀರು ಸಿಂಗ್ ಶೆಖಾವತ್, ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ ಮಗರ್, ಸುಬೇದಾರ್ ಜೋಗಿಂದರ್ ಸಿಂಗ್ ಸಹನಾನ್, ಮೇಜರ್ ಶೈತಾನ್ ಸಿಂಗ್ ಭಾಟಿ, ಕಂಪನಿ ಕ್ವಾರ್ಟರ್ ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ತಾರಾಪೋರ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ಕರ್ನಲ್ ಹೋಶಿಯಾರ್ ಸಿಂಗ್ ದಹಿಯಾ, ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್, ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್, ಮೇಜರ್ ರಾಮಸ್ವಾಮಿ ಪರಮೇಶ್ವರನ್, ಕ್ಯಾಪ್ಟನ್ ಬನಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಮತ್ತು ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರ ಹೆಸರನ್ನು ದ್ವೀಪಗಳಿಗೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT