ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಮಳೆ ಅಬ್ಬರ: 23 ಮಂದಿ ಸಾವು

Last Updated 19 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌/ನೈನಿತಾಲ್‌ (ಪಿಟಿಐ): ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಮಳೆಯ ಹೊಡೆತಕ್ಕೆ ಮಂಗಳವಾರ 23 ಮಂದಿ ಬಲಿಯಾಗಿದ್ಧಾರೆ. ಎರಡು ದಿನಗಳಲ್ಲಿ ಮಳೆಯಿಂದಾದ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಫತೇಪುರ ಜಿಲ್ಲೆಯಲ್ಲಿ ಮನೆಯೊಂದು ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬೇರೆಡೆ ಇತರ ಇಬ್ಬರು ಮೃತಪಟ್ಟಿದ್ದಾರೆ. ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಿಂದ ಸಮಸ್ಯೆಗೆ ಒಳಗಾಗಿದ್ದ ಒಡಿಶಾದಲ್ಲಿ ಇನ್ನೆರಡು ದಿನ ಮಳೆ ಸುರಿಯಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಡಿಶಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಜಸ್ಥಾನದಲ್ಲಿಯೂ ಮತ್ತೆ ಮಳೆ ಬೀಳುವ ಮುನ್ಸೂಚನೆಯನ್ನು ಇಲಾಖೆ ಕೊಟ್ಟಿದೆ.

ಉತ್ತರಾಖಂಡದ ಪ್ರವಾಸಿತಾಣ ನೈನಿತಾಲ್‌, ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಡಿದು
ಕೊಂಡಿದೆ. ನೈನಿತಾಲ್‌ ಸಂಪರ್ಕಿಸುವ ಮೂರು ರಸ್ತೆಗಳಲ್ಲಿ ಭೂಕುಸಿತವಾಗಿದೆ.

ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರಬಹುದು. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಬಹುದು ಎಂಬ ಭೀತಿಯನ್ನು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ವ್ಯಕ್ತಪಡಿಸಿದ್ದಾರೆ.

ಸೇನೆಯ ಮೂರು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಬರಲಿವೆ. ಅವುಗಳಲ್ಲಿ ಎರಡನ್ನು ನೈನಿತಾಲ್ ಜಿಲ್ಲೆಗೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ನೈನಿತಾಲ್‌ ಪಟ್ಟಣದ ಹಲವು ಭಾಗಗಳು ಜಲಾವೃತವಾಗಿವೆ. ವಿದ್ಯುತ್‌, ದೂರ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕವು ಹಲವೆಡೆ ಸ್ಥಗಿತಗೊಂಡಿದೆ.

ಕೇರಳದಲ್ಲಿ ಮತ್ತೆ ಮಳೆ:ಕೇರಳದಲ್ಲಿ ಬುಧವಾರ–ಗುರುವಾರ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ (6 ಸೆಂ.ಮೀ. ನಿಂದ 20 ಸೆಂ. ಮೀ. ಮಳೆ) ಘೋಷಿಸಲಾಗಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇದೇ 21ರವರೆಗೆ ಈ ಹಿಂದೆಯೇ ಆರೆಂಜ್‌ ಅಲರ್ಟ್‌ ಘೋಷಿಸಲಾಗಿತ್ತು.

ಇದೇ 15–16ರಂದು ಕೇರಳದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿತ್ತು ಮತ್ತು ಭೂಕುಸಿತ ಸಂಭವಿಸಿತ್ತು. 24 ಜನರು ಮೃತರಾಗಿದ್ದರು. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಕೇರಳದಲ್ಲಿ ಹತ್ತಕ್ಕೂ ಹೆಚ್ಚು ಜಲಾಶಯಗಳು ತುಂಬಿವೆ. ಹಲವು ಜಲಾಶಯಗಳಿಂದ ನೀರು ಹೊರಗೆ ಹರಿಸಲಾಗುತ್ತಿದೆ. ಅಣೆಕಟ್ಟೆಗಳ ಕೆಳ ಭಾಗಗಳಲ್ಲಿ ಇರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT