ಭಾನುವಾರ, ಜನವರಿ 23, 2022
27 °C

ನ್ಯಾಯಮೂರ್ತಿಗಳ ನೇಮಕ:ನನೆಗುದಿಯಲ್ಲಿ 23 ಕೊಲಿಜಿಯಂ ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ವಿವಿಧ ಹೈಕೋರ್ಟ್‌ಗಳ ಕೊಲಿಜಿಯಂ ಶಿಫಾರಸು ಮಾಡಿ, ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅನುಮೋದಿಸಿರುವ 23 ಹೆಸರುಗಳು, 2018ರಿಂದಲೂ ನನೆಗುದಿಯಲ್ಲಿವೆ. ಕೇಂದ್ರ ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. 

ನ್ಯಾಯಾಂಗದ ಉನ್ನತ ಸ್ಥಾನಗಳ ನೇಮಕಾತಿ ಪ್ರಕ್ರಿಯೆಯನ್ನು ಗಮನಿಸುತ್ತಿರುವ ಮೂಲಗಳು ಇದನ್ನು ದೃಢಪಡಿಸಿವೆ. ಕನಿಷ್ಠ ಏಳು ಹೈಕೋರ್ಟ್‌ಗಳ ಕೊಲಿಜಿಯಂಗಳು ಈ ಹೆಸರುಗಳನ್ನು ಶಿಫಾರಸು ಮಾಡಿದ್ದವು. ಶಿಫಾರಸು ಮರು ಪರಿಶೀಲಿಸಬೇಕು ಎಂದು ಸೂಚಿಸಿ ಕನಿಷ್ಠ 23 ಹೆಸರುಗಳಿಗೆ ಸಂಬಂಧಿಸಿದ ಕಡತವನ್ನು ವಾಪಸು ಕಳುಹಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹೆಸರುಗಳನ್ನೇ ವಿವಿದ ಹಂತದಲ್ಲಿ ಮತ್ತೆ ಶಿಫಾರಸು ಮಾಡಿತ್ತು.

ಈ ಪೈಕಿ ಕರ್ನಾಟಕ ಹೈಕೋರ್ಟ್‌ ಮತ್ತು ಜಮ್ಮು ಕಾಶ್ಮೀರ ಹೈಕೋರ್ಟ್‌ಗೆ ತಲಾ ಒಬ್ಬರು ನ್ಯಾಯಮೂರ್ತಿಗಳ ನೇಮಕ ಕುರಿತಂತೆ ಎರಡು ಹೆಸರುಗಳನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಶಿಫಾರಸು ಮಾಡಿದೆ. ಎರಡೂ ಪ್ರಕರಣದಲ್ಲಿ ಶಿಫಾರಸುಗೊಂಡವರು ವಕೀಲರಾಗಿದ್ದು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ನೇಮಕ ಕುರಿತು 2018ರಲ್ಲಿ, ಕರ್ನಾಟಕ ಹೈಕೋರ್ಟ್‌ಗೆ ನೇಮಕ ಕುರಿತು 2019ರಲ್ಲಿ ಶಿಫಾರಸು ಮಾಡಲಾಗಿತ್ತು.

ಹೀಗೆ ವಿವಿಧ ಹೈಕೋರ್ಟ್‌ಗಳ ಕೊಲಿಜಿಯಂ ಶಿಫಾರಸು ಮಾಡಿದ್ದ 23 ಹೆಸರುಗಳು ನನೆಗುದಿಯಲ್ಲಿವೆ. 2021ರಲ್ಲಿ ವಿವಿಧ ಹೈಕೋರ್ಟ್‌ಗಳಿಗೆ 120 ನ್ಯಾಯಮೂರ್ತಿಗಳ ನೇಮಕವಾಗಿದೆ. 2016ರಲ್ಲಿ ದಾಖಲೆ ಸಂಖ್ಯೆಯಲ್ಲಿ ಅಂದರೆ 126 ನ್ಯಾಯಮೂರ್ತಿಗಳನ್ನು ನೇಮಿಸಲಾಗಿತ್ತು.

ಡಿಸೆಂಬರ್ 1, 2021ರಲ್ಲಿ ಇದ್ದಂತೆ ವಿವಿಧ 25 ಹೈಕೋರ್ಟ್‌ಗಳಿಗೆ ಮಂಜೂರಾಗಿದ್ದ ನ್ಯಾಯಮೂರ್ತಿಗಳ ಒಟ್ಟು ಹುದ್ದೆಗಳ ಸಂಖ್ಯೆ 1,098. ಸದ್ಯ, 696 ನ್ಯಾಯಮೂರ್ತಿಗಳಿದ್ದು, 402 ಸ್ಥಾನಗಳು ಖಾಲಿ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು