ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಮಡಿಲು ಸೇರಿದ ಮೂರು ಚಿರತೆ ಮರಿಗಳು

Last Updated 8 ಏಪ್ರಿಲ್ 2021, 16:02 IST
ಅಕ್ಷರ ಗಾತ್ರ

ಮುಂಬೈ: ತಾಯಿಯಿಂದ ಬೇರ್ಪಟ್ಟಿದ್ದ ಮೂರು ಚಿರತೆ ಮರಿಗಳನ್ನು ಪುನಃ ತಾಯಿ ಮಡಿಲು ಸೇರಿಸುವಲ್ಲಿ ಮಹಾರಾಷ್ಟ್ರದ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್‌ನಲ್ಲಿರುವ ವಡ್ಗಾಂವ್ ಸಹಾನಿ ಗ್ರಾಮದ ಕಬ್ಬಿನ ಹೊಲವೊಂದರಲ್ಲಿ ಮೂರು ಚಿರತೆ ಮರಿಗಳು ತಾಯಿಂದ ಬೇರ್ಪಟ್ಟಿರುವುದನ್ನು ರೈತರು ಕಂಡಿದ್ದರು. ಈ ಮರಿಗಳನ್ನು ಪುನಃ ತಾಯಿ ಮಡಿಲು ಸೇರಿಸುವ ಪ್ರಯತ್ನದಲ್ಲಿ ವನ್ಯಜೀವಿ ಸಂಘಟನೆ ಎಸ್‌ಒಎಸ್ ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆ ಸಫಲವಾಗಿವೆ.

ವಡ್ಗಾಂವ್ ಸಹಾನಿ ಗ್ರಾಮದಲ್ಲಿ ಈ ವಾರದ ಆರಂಭದಲ್ಲಿ ಸ್ಥಳೀಯ ರೈತರು ಕಬ್ಬು ಕಟಾವು ಮಾಡುವಾಗ ಹೊಲದಲ್ಲಿ ಮೂರು ಸಣ್ಣ ಚಿರತೆ ಮರಿಗಳು ಕಂಡುಬಂದಾಗ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವನ್ಯಜೀವಿ ಸಂಘನೆ ಎಸ್‌ಒಎಸ್‌ ನೆರವಿನಿಂದ ಚಿರತೆ ಮರಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಚಿರತೆ ಸಂರಕ್ಷಣಾ ಕೇಂದ್ರಕ್ಕೆ ತರಲಾಯಿತು.

ಚಿರತೆ ಮರಿಗಳ ಆರೋಗ್ಯ ಪರೀಕ್ಷಿಸಿದ ವನ್ಯಜೀವಿ ಸಂಘಟನೆ ಎಸ್‌ಒಎಸ್‌ನ ಪಶುವೈದ್ಯ ಡಾ.ನಿಖಿಲ್‌ ಬಂಗಾರ್‌, ಮೂರು ಮರಿಗಳಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಮರಿ ಇರುವುದನ್ನು ಗುರುತಿಸಿದರು. ಈ ಮರಿಗಳು 15 ದಿನಗಳ ಪ್ರಾಯದವಾಗಿದ್ದು, ಆರೋಗ್ಯವಾಗಿರುವುದನ್ನು ದೃಢಪಡಿಸಿದರು.

ಈ ಮರಿಗಳನ್ನು ಪುನಃ ತಾಯಿ ಮಡಿಲು ಸೇರಿಸುವ ಆರಂಭಿಕ ಪ್ರಯತ್ನ ಕೈಗೂಡಿರಲಿಲ್ಲ. ಆದರೆ, ಛಲಬಿಡದೆ ಪ್ರಯತ್ನ ಮುಂದುವರಿಸಲಾಯಿತು.

ತಾಯಿ ಚಿರತೆ ಬಂದು, ತನ್ನ ಮರಿಗಳನ್ನು ಕೊಂಡೊಯ್ಯಬಹುದೆಂಬ ನಿರೀಕ್ಷೆಯೊಂದಿಗೆ ರಕ್ಷಣಾ ತಂಡವು ಸುರಕ್ಷಿತ ಪೆಟ್ಟಿಗೆಯಲ್ಲಿ ಮೂರು ಮರಿಗಳನ್ನು ಇಟ್ಟುಕೊಂಡು ಕಬ್ಬಿನ ಹೊಲದಲ್ಲಿ ಸೋಮವಾರ ರಾತ್ರಿ ಬೀಡುಬಿಟ್ಟಿತ್ತು. ಇಡೀ ರಾತ್ರಿಯೆಲ್ಲ ಕಣ್ಗಾವಲಿಟ್ಟು ಕಾಯುವಾಗ, ತಾಯಿ ಚಿರತೆ ಮುಂಜಾನೆ ವೇಳೆಗೆ ಹೊಲಕ್ಕೆ ಸಮೀಪಿಸಿತು. ಪೆಟ್ಟಿಗೆ ಬಳಿ ಬಂದ ಚಿರತೆ ತನ್ನ ಮರಿಗಳನ್ನು ಗುರುತಿಸಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಿತು. ವನ್ಯಜೀವಿ ಸಂಘಟನೆ ಎಸ್‌ಒಎಸ್‌ನ ಸದಸ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಮೊಗದಲ್ಲಿ ನಿರಾಳ ಭಾವ ಮೂಡಿತು.

ವನ್ಯಜೀವಿ ಸಂಘಟನೆ ಎಸ್‌ಒಎಸ್‌ನ ಪಶುವೈದ್ಯಾಧಿಕಾರಿ ಡಾ.ನಿಖಿಲ್‌ ಬಂಗಾರ್‌, ‘ತಾಯಿ ಮಡಿಲಿಗೆ ಮರಿಗಳನ್ನು ಸೇರಿಸುವ ಆರಂಭಿಕ ಪ್ರಯತ್ನ ಕೈಗೂಡಿರಲಿಲ್ಲ. ಆದರೆ ನಮ್ಮ ತಂಡ ಭರವಸೆ ಕಳೆದುಕೊಂಡಿರಲಿಲ್ಲ. ಮರು ದಿನ ತಾಯಿ ಚಿರತೆ ತನ್ನ ಮರಿಗಳನ್ನು ಅವುಚಿಕೊಂಡು ಹೋಗುವುದನ್ನು ನೋಡಿದಾಗ ಶ್ರಮ ಸಾರ್ಥಕ ಎನಿಸಿತು. ಕಳೆದ ಎರಡು ತಿಂಗಳಿನಿಂದ ಇದೇ ರೀತಿ ಹತ್ತು ಚಿರತೆ ಮರಿಗಳನ್ನು ಮರಳಿ ತಾಯಿ ಮಡಿಲು ಸೇರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

‘ಚಿರತೆ ಮರಿಗಳು ಪತ್ತೆಯಾದ ಬಗ್ಗೆ ಅರಣ್ಯ ಇಲಾಖೆಗೆ ಸಕಾಲಕ್ಕೆ ಮಾಹಿತಿ ನೀಡಿ ಸರಿಯಾದ ಹೆಜ್ಜೆ ಇಟ್ಟ ಗ್ರಾಮಸ್ಥರಿಗೆ ನಾವು ಆಭಾರಿಯಾಗಿದ್ದೇವೆ. ಗ್ರಾಮಸ್ಥರಲ್ಲಿ ಚಿರತೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆಯ ಅಗತ್ಯವನ್ನು ಉತ್ತೇಜಿಸಲು ವನ್ಯಜೀವಿ ಎಸ್‌ಒಎಸ್ ಅರಣ್ಯ ಇಲಾಖೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ವನ್ಯಜೀವಿ ಎಸ್‌ಒಎಸ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT