ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ನಕಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಕರಣದಲ್ಲಿ ಮತ್ತೆ ಮೂವರ ಬಂಧನ

Last Updated 26 ಜೂನ್ 2021, 7:36 IST
ಅಕ್ಷರ ಗಾತ್ರ

ಕೋಲ್ಕತ್ತ: ಇಲ್ಲಿನ ಕಸಬಾ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯ ಸೋಗಿನಲ್ಲಿ ದೇವಂಜನ್‌ ದೇವ್‌ ಎಂಬ ವ್ಯಕ್ತಿ ನಕಲಿ ಲಸಿಕಾ ಕೇಂದ್ರ ತೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಮೂವರನ್ನು ಬಂಧಿಸಲಾಗಿದೆ.

ಬಂಧಿತರು ದೇವಂಜನ್‌ ದೇವ್‌ ಸಹಚರರು. ಈ ಪೈಕಿ ಇಬ್ಬರು ಆರೋಪಿಗಳು ಕೋಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಹೆಸರಿನಲ್ಲಿ ಆರೋಪಿಯು ತೆರೆದಿದ್ದ ಬ್ಯಾಂಕ್‌ ಖಾತೆಗೆ ಸಹಿ ಹಾಕಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇವ್‌ನ ವೇತನದಾರರ ಪಟ್ಟಿಯಲ್ಲಿದ್ದ ಮೂರನೇ ಆರೋಪಿಯು ಲಸಿಕೆ ಶಿಬಿರಗಳಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದಲ್ಲದೆ, ಅನೇಕರನ್ನು ನಕಲಿ ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸಿದ್ದರು ಎಂದೂ ಅವರು ಹೇಳಿದ್ದಾರೆ.

ಬಂಧಿತರಲ್ಲಿ ಒಬ್ಬರು ಸಾಲ್ಟ್ ಲೇಕ್ ಪ್ರದೇಶದವರು. ಮತ್ತೊಬ್ಬರು ಬರಾಸತ್‌ನವರು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಲಾಗಿದೆ. ಮೂರನೇ ಆರೋಪಿಯು ತಾಲ್ತಲಾ ನಿವಾಸಿಯಾಗಿದ್ದು, ಲಸಿಕೆ ಶಿಬಿರಗಳ ಆಯೋಜನೆಯಲ್ಲಿ ಸಕ್ರಿಯರಾಗಿದ್ದುದು ಖಚಿತಗೊಂಡ ಬಳಿಕ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ನಡೆಸುತ್ತಿದ್ದ ಲಸಿಕಾ ಶಿಬಿರದಲ್ಲಿ ನಟಿ, ತೃಣಮೂಲ ಕಾಂಗ್ರೆಸ್‌ ಸಂಸದೆ ಮಿಮಿ ಚಕ್ರವರ್ತಿ ಕೋವಿಡ್‌ ಲಸಿಕೆ ಪಡೆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ದೇವಂಜನ್‌ ದೇವ್‌ ಬಂಧನವಾಗಿತ್ತು. ಕೋಲ್ಕತ್ತ ಮಹಾನಗರ ಪಾಲಿಕೆಯ ಸಹ ಆಯುಕ್ತ ಎಂದು ಪರಿಚಯಿಸಿಕೊಂಡಿದ್ದ ದೇವಂಜನ್‌ ದೇವ್‌ ಉಚಿತವಾಗಿ ಕೋವಿಡ್‌ ಲಸಿಕೆಯನ್ನು ನೀಡುವ ಕೇಂದ್ರವನ್ನು ತೆರೆದಿದ್ದರು ಎಂದು ಕೋಲ್ಕತ್ತ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT