ಮಂಗಳವಾರ, ಮೇ 24, 2022
30 °C
2014–2019ರ ಅವಧಿಯಲ್ಲಿ 6 ಮಂದಿ ಮಾತ್ರ ತಪ್ಪಿತಸ್ಥರು

2014–2019ರ ನಡುವೆ 326 ದೇಶದ್ರೋಹ ಪ್ರಕರಣ ದಾಖಲು: 6 ಮಂದಿ ಮಾತ್ರ ತಪ್ಪಿತಸ್ಥರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ 2014 ಮತ್ತು 2019ರ ಅವಧಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದಂತೆ 326 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಆರು ಮಂದಿ ಮಾತ್ರ ತಪ್ಪಿತಸ್ಥರೆಂದು ಸಾಬೀತಾಗಿದೆ.

ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಮಾಹಿತಿ ಒದಗಿಸಿದ್ದು, ಅಸ್ಸಾಂ ರಾಜ್ಯದಲ್ಲಿ ಅತಿ ಹೆಚ್ಚಿನ 54 ಪ್ರಕರಣಗಳು ದಾಖಲಾಗಿವೆ. ಆರು ವರ್ಷಗಳ ಈ ಅವಧಿಯಲ್ಲಿ 141 ಪ್ರಕರಣಗಳಲ್ಲಿ ಮಾತ್ರ ಆರೋಪಪಟ್ಟಿ ದಾಖಲಿಸಲಾಗಿದೆ.

ಅಸ್ಸಾಂನಲ್ಲಿನ 54 ಪ್ರಕರಣಗಳ ಪೈಕಿ 26ರಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ. 25 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಾಗಿದೆ. ಆದರೆ, 2014 ಮತ್ತು 2019ರ ಅವಧಿಯಲ್ಲಿ ಯಾವುದೇ ಪ್ರಕರಣದಲ್ಲೂ ಆರೋಪಿಗಳು ತಪ್ಪಿತಸ್ಥರು ಎನ್ನುವುದು ಸಾಬೀತಾಗಿಲ್ಲ.

ಕರ್ನಾಟಕದಲ್ಲಿ 22 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದ್ದು, 17 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಒಂದು ಪ್ರಕರಣದಲ್ಲಿ ಮಾತ್ರ ವಿಚಾರಣೆ ಮುಗಿದಿದೆ. ಕರ್ನಾಟಕದಲ್ಲೂ ಈ ಆರು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಕರಣದಲ್ಲಿಯೂ ಒಬ್ಬ ವ್ಯಕ್ತಿಯೂ ತಪ್ಪಿತಸ್ಥ ಎನ್ನುವುದು ಸಾಬೀತಾಗಿಲ್ಲ.

ಬಿಹಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ತಲಾ 25 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಾರಾಷ್ಟ್ರ, ಪಂಜಾಬ್‌ ಮತ್ತು ಉತ್ತರಾಖಂಡದಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ.

ಮೇಘಾಲಯ, ಮಿಜೋರಾಂ, ತ್ರಿಪುರಾ, ಸಿಕ್ಕಿಂ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ, ಚಂಡೀಗಡ, ದಮನ್‌ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿಲ್ಲ.

 2019ರಲ್ಲಿ ಅತಿ ಹೆಚ್ಚಿನ 93 ಪ್ರಕರಣಗಳನ್ನು ದಾಖಲಿಸಲಾಗಿದೆ. ನಂತರ, 2018ರಲ್ಲಿ 70, 2017ರಲ್ಲಿ 51, 2014ರಲ್ಲಿ 47, 2016ರಲ್ಲಿ 35 ಮತ್ತು 2015ರಲ್ಲಿ 30 ಪ್ರಕರಣಗಳನ್ನು ದಾಖಲಿಸಲಾಗಿದೆ.

 2020ರ ಮಾಹಿತಿಯನ್ನು ಇನ್ನೂ ಸಿದ್ಧಪ‍ಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ(ಐಪಿಸಿ) 124 (ಎ)(ದೇಶದ್ರೋಹ) ಸೆಕ್ಷನ್‌ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯಂತ ವ್ಯಕ್ತಿಗಳನ್ನು ಸುಮ್ಮನಿರಿಸಲು ಬ್ರಿಟಿಷರು ಈ ಕಾನೂನಿನ ಮೂಲಕ ಕ್ರಮಕೈಗೊಳ್ಳುತ್ತಿದ್ದರು. ಆದರೆ, ಇಂದಿಗೂ ಈ ಕಾನೂನು ಜಾರಿಯಲ್ಲಿದೆ. ಬ್ರಿಟಿಷರ ಕಾಲದ ಈ ಕಾನೂನು ರದ್ದುಪಡಿಸಲು ಕೇಂದ್ರ ಸರ್ಕಾರ ಏಕೆ ಕ್ರಮಕೈಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ಪ್ರಶ್ನಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು