ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿಯೆ, ಸಿರಿಯಾಗೆ 45 ದೇಶಗಳಿಂದ ನೆರವು ಘೋಷಣೆ

Last Updated 6 ಫೆಬ್ರುವರಿ 2023, 14:25 IST
ಅಕ್ಷರ ಗಾತ್ರ

ಬರ್ಲಿನ್‌, ಜರುಸಲೆಂ : ‘ಪ್ರಬಲ ಭೂಕಂಪದಲ್ಲಿ ಸಿಲುಕಿರುವವರ ಶೋಧ ಮತ್ತು ರಕ್ಷಣೆಗೆ ಅಮೆರಿಕ, ಜರ್ಮನಿ ಸೇರಿದಂತೆ 45 ದೇಶಗಳು ನೆರವು ನೀಡುವುದಾಗಿ ಘೋಷಿಸಿವೆ’ ಎಂದು ಟರ್ಕಿಯೆ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.

‘ಜರ್ಮನಿಯು ಟರ್ಕಿಯೆಯೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರ ರಕ್ಷಣೆಗೆ ನೆರವಿನ ಹಸ್ತ ಚಾಚಿದೆ. ಹಾಗೆಯೇ ಸಿರಿಯಾದೊಂದಿಗೆ ಯಾವುದೇ ಅಧಿಕೃತ ಸಂಪರ್ಕ ಇಲ್ಲದ ಕಾರಣ ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯ ಮೂಲಕ ನೆರವು ಕಳುಹಿಸಲಿದೆ’ ಎಂದು ಜರ್ಮನಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

‘ಭೂಕಂಪ ಪೀಡಿತ ಸಿರಿಯಾಗೆ ನೆರವು ನೀಡಲು ಇಸ್ರೇಲ್‌ ನಿರ್ಧರಿಸಿದೆ’ ಎಂದು ಪ್ರಧಾನಿ ನೆತನ್ಯಾಹು ಬೆಂಜಮಿನ್‌ ಅವರು ತಿಳಿಸಿದ್ದಾರೆ.

ಬ್ರಿಟನ್‌ನಿಂದ ತುರ್ತು ನೆರವು:

ಟರ್ಕಿಯೆಗೆ ಶೋಧ ಮತ್ತು ರಕ್ಷಣಾ ಪರಿಣತರು ಹಾಗೂ ತುರ್ತು ವೈದ್ಯಕೀಯ ತಂಡವನ್ನು ಕಳುಹಿಸಲಾಗುವುದು ಎಂದು ಬ್ರಿಟನ್‌ ತಿಳಿಸಿದೆ.

76 ಮಂದಿ ಶೋಧ ಮತ್ತು ರಕ್ಷಣಾ ಪರಿಣತರು, ನಾಲ್ಕು ಶ್ವಾನಗಳು ಹಾಗೂ ರಕ್ಷಣಾ ಸಲಕರಣಗಳನ್ನು ಕಳುಹಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿಯಿಂದ ನೆರವಿನ ಭರವಸೆ

ಭೂಕಂಪನದಿಂದ ಉಂಟಾದ ಸಾವು–ನೋವಿಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಸಿರಿಯಾ ಮತ್ತು ಟರ್ಕಿಯೆಯ ಜನರ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ನೆರವು ಮತ್ತು ಬೆಂಬಲ ನೀಡಲು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವ ಎಸ್‌.ಜಯಶಂಕರ್ ಅವರೂ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿ, ಉಭಯ ದೇಶಗಳಿಗೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ ರವಾನೆಗೆ ನಿರ್ಧಾರ:

ಭೂಕಂಪ ಪೀಡಿತ ಟರ್ಕಿಯೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಲಾ 100 ಜನರನ್ನು ಒಳಗೊಂಡ ಎರಡು ತಂಡ, ವೈದ್ಯಕೀಯ ತಂಡ ಮತ್ತು ಪರಿಹಾರ ಸಾಮಗ್ರಿಗಳನ್ನು ತಕ್ಷಣವೇ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ಮೋದಿ ಅವರ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ಸೌತ್‌ ಬ್ಲಾಕ್‌ನಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಕಾರ್ಯದರ್ಶಿ, ಗೃಹ, ರಕ್ಷಣೆ ಮತ್ತು ವಿದೇಶಾಂಗ, ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT