20 ಲಕ್ಷ ದಂಡ ಪಾವತಿಸಲು ನಟಿ ಜೂಹಿ ಚಾವ್ಲಾ ಮತ್ತು ಇತರರಿಗೆ ಒಂದು ವಾರ ಕಾಲಾವಕಾಶ

ನವದೆಹಲಿ: ಭಾರತದಲ್ಲಿ 5 ಜಿ ವೈರ್‌ಲೆಸ್ ತಂತ್ರಜ್ಞಾನದ ವಿರುದ್ಧ ಮೊಕದ್ದಮೆಯ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಬಾಲಿವುಟ್ ನಟಿ-ಪರಿಸರವಾದಿ ಜೂಹಿ ಚಾವ್ಲಾ ಅವರಿಗೆ ದೆಹಲಿ ಹೈಕೋರ್ಟ್ 20 ಲಕ್ಷ ರೂ. ದಂಡ ವಿಧಿಸಿತ್ತು. ಇದೀಗ 20 ಲಕ್ಷ ದಂಡ ಪಾವತಿಗೆ ಹೆಚ್ಚುವರಿಯಾಗಿ ಒಂದು ವಾರ ಸಮಾಯಾವಕಾಶ ನೀಡಿ ಬುಧವಾರ ಆದೇಶಿಸಿದೆ.
'ಫಿರ್ಯಾದುದಾರರ ನಡವಳಿಕೆಯಿಂದ ನ್ಯಾಯಾಲಯವು ಆಘಾತಕ್ಕೊಳಗಾಗಿದೆ' ಎಂದ ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರು, ಚಾವ್ಲಾ ಮತ್ತು ಇತರರು 'ವೆಚ್ಚವನ್ನು ಜಮೆ ಮಾಡಲು ಕೂಡ ಸಿದ್ಧರಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾವ್ಲಾ ಪರ ವಕೀಲರಾದ ಹಿರಿಯ ವಕೀಲ ಮೀಟ್ ಮಲ್ಹೋತ್ರಾ ದಂಡವನ್ನು ಮನ್ನಾ ಮಾಡುವ ಅರ್ಜಿಯನ್ನು ಹಿಂತೆಗೆದುಕೊಂಡ ನಂತರ, ಈ ಹಣವನ್ನು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಠೇವಣಿ ಇಡಲಾಗುವುದು ಅಥವಾ ಇದಕ್ಕೆ ಸಂಬಂಧಿಸಿದ ಇತರೆ ಕಾನೂನು ಪರಿಹಾರಗಳ ಕುರಿತು ಯೋಚಿಸಲಾಗುವುದು ಎಂದು ಹೇಳಿದ ನಂತರ ನ್ಯಾಯಾಲಯದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಒಂದು ಕಡೆ ನೀವು ಕ್ಷುಲ್ಲಕ ಅರ್ಜಿಯನ್ನು ಸಲ್ಲಿಸುತ್ತೀರಿ ಮತ್ತು ಮತ್ತೊಂದೆಡೆ, ನೀವು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತೀರಿ ಹಾಗೂ ಅರ್ಜಿದಾರರು ವೆಚ್ಚವನ್ನು ಕೂಡ ಜಮೆ ಮಾಡಲು ಸಿದ್ಧರಿಲ್ಲ' ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: 5 ಜಿ ತಂತ್ರಜ್ಞಾನ: ಜೂಹಿ ಚಾವ್ಲಾರ ಅರ್ಜಿ 'ಮಾಧ್ಯಮ ಪ್ರಚಾರಕ್ಕಾಗಿ' ಎಂದ ನ್ಯಾಯಾಲಯ
ಇದಕ್ಕೆ ಪ್ರತಿಕ್ರಿಯಿಸಿದ ಮಲ್ಹೋತ್ರಾ, 'ದಂಡವನ್ನು ಪಾವತಿಸುವುದಿಲ್ಲ ಎಂಬ ನಿಲುವನ್ನು ನಾವು ಹೊಂದಿಲ್ಲ ಮತ್ತು ಅದರ ಮನ್ನಾಕ್ಕೆ ಕೂಡ ಅರ್ಜಿಯನ್ನು ಸಲ್ಲಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ವೆಚ್ಚವನ್ನು ಠೇವಣಿ ಇಡಲು ವಾರಗಳ ಸಮಯವನ್ನು ಕೋರಿದ್ದೇನೆ ಮತ್ತು ಕಾನೂನು ಪರಿಹಾರಗಳನ್ನು ಪಡೆಯಲು ಸಹಾಯವನ್ನು ತೆಗೆದುಕೊಳ್ಳಬಹುದು ಎಂಬ ಮಲ್ಹೋತ್ರಾ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ನ್ಯಾಯಾಲಯದ ಶುಲ್ಕವನ್ನು ಮರುಪಾವತಿಸುವ ಅರ್ಜಿಯನ್ನು ಕೂಡ ಮಲ್ಹೋತ್ರಾ ಹಿಂತೆಗೆದುಕೊಂಡರು. ನ್ಯಾಯಾಲಯದ ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಚಾವ್ಲಾ ಮತ್ತು ಇತರರ ಪರ ಹಾಜರಾದ ವಕೀಲ ದೀಪಕ್ ಖೋಸ್ಲಾ ಮಾಹಿತಿ ನೀಡಿದರು.
ಪ್ರಕರಣದ ಮುಂದಿನ ವಿಚಾರಣೆಯು ಜುಲೈ 12 ರಂದು ನಡೆಯಲಿದೆ.
ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ಜೂನ್‌ನಲ್ಲಿ ಚಾವ್ಲಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್, 20 ಲಕ್ಷ ರೂ. ದಂಡ ವಿಧಿಸಿತ್ತು. ಇದು ಪ್ರಚಾರಕ್ಕಾಗಿ ಮಾಡಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಇನ್ನಷ್ಟು...
ಜೂಹಿ ಚಾವ್ಲಾ ಚಿತ್ರಗಳ ಗೀತೆ ಹಾಡಿದ ಅಪರಿಚಿತ: ಅರ್ಜಿ ವಿಚಾರಣೆಗೆ ಅಡ್ಡಿ
5ಜಿ ನೆಟ್ವರ್ಕ್ ಬೇಡ ಎಂದಿದ್ದ ನಟಿ ಜೂಹಿ ಚಾವ್ಲಾಗೆ ಹೈಕೋರ್ಟ್ ₹20 ಲಕ್ಷ ದಂಡ!
5G ಬೇಡ ಎಂದಿದ್ದಕ್ಕೆ ₹20 ಲಕ್ಷ ದಂಡ: ಟ್ರೋಲ್ಗೆ ತುತ್ತಾದ ನಟಿ ಜೂಹಿ ಚಾವ್ಲಾ
5ಜಿ ದಾವೆ: ಗದ್ದಲದಲ್ಲಿ ಪ್ರಮುಖ ಸಂದೇಶವೇ ಕಳೆದು ಹೋಯ್ತೆಂದ ಜೂಹಿ ಚಾವ್ಲಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.