ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ಬಾಂಬ್ ಸ್ಫೋಟದಲ್ಲಿ ಏಳು ವರ್ಷದ ಬಾಲಕ ಸಾವು, ಮತ್ತೋರ್ವನಿಗೆ ಗಾಯ

Last Updated 22 ಮಾರ್ಚ್ 2021, 14:26 IST
ಅಕ್ಷರ ಗಾತ್ರ

ಬುರ್ದ್ವಾನ್: ಪಶ್ಚಿಮ ಬಂಗಾಳದ ಬುರ್ದ್ವಾನ್ ನಗರದಲ್ಲಿ ಸೋಮವಾರ ನಡೆದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಏಳು ವರ್ಷದ ಬಾಲಕ ಮೃತಪಟ್ಟಿದ್ದಾನೆ ಮತ್ತು ಇನ್ನೊಂದು ಮಗು ಗಾಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ರಸಿಕ್‌ಪುರದ ಸುಭಾಸ್ಪಲ್ಲಿ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಶೇಖ್ ಅಫ್ರೋಜ್ (7) ಮತ್ತು ಶೇಖ್ ಇಬ್ರಾಹಿಂ (9) ಎಂಬ ಮಕ್ಕಳು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ಕಚ್ಚಾ ಬಾಂಬ್‌ಗಳನ್ನು ಇಟ್ಟಿದ್ದ ಪ್ಯಾಕೆಟ್‌ಗೆ ಡಿಕ್ಕಿ ಹೊಡೆದಾಗ ಸ್ಫೋಟ ಸಂಭವಿಸಿದೆ ಎಂದು ಬುರ್ದ್ವಾನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿಂಟು ಸಾಹ ತಿಳಿಸಿದ್ದಾರೆ.

ಸ್ಫೋಟದ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಬಾಲಕರು ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಸ್ವಲ್ಪ ಸಮಯದ ನಂತರ ಅಫ್ರೋಜ್ ಮೃತಪಟ್ಟಿದ್ದಾನೆ. ಇಬ್ರಾಹಿಂ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾಹ ತಿಳಿಸಿದ್ದಾರೆ.

ಅಫ್ರೋಜ್ ಅವರ ಚಿಕ್ಕಪ್ಪ ಶೇಖ್ ಫಿರೋಜ್ ಪಿಟಿಐ ಜೊತೆ ಮಾತನಾಡಿದ್ದು, ಪ್ರತಿದಿನ ಬೆಳಿಗ್ಗೆ ಸ್ಥಳೀಯ ಮಕ್ಕಳು ಆ ಸ್ಥಳದಲ್ಲಿ ಆಡುತ್ತಾರೆ. ಆದರೆ ಅವರಲ್ಲಿ ಇಬ್ಬರು ಮಾತ್ರ ಇಂದು ಆಟವಾಡುತ್ತಿದ್ದರು ಎಂದಿದ್ದಾರೆ.

ತನಿಖೆ ಆರಂಭಿಸಲಾಗಿದ್ದು, ಆ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚುನಾವಣೆಗೆ ಮುಂಚೆಯೇ ಈ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದರಿಂದ ಉದ್ವಿಗ್ನತೆ ಉಂಟಾಗಿದ್ದು, ಘಟನೆಯ ನಂತರ, ಚುನಾವಣಾ ಆಯೋಗವು ಪೂರ್ಬಾ ಬರ್ಧಮಾನ್ ಜಿಲ್ಲಾಧಿಕಾರಿಗಳಿಂದ ವರದಿ ಕೋರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸಿಕ್‌ಪುರ ಬರ್ಧಮಾನ್ ದಕ್ಷಿಣ ಕ್ಷೇತ್ರದಲ್ಲಿದ್ದು, ಏಪ್ರಿಲ್ 17 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT