ಮಂಗಳವಾರ, ಜನವರಿ 31, 2023
19 °C

74ನೇ ಗಣರಾಜ್ಯೋತ್ಸವ ಸಂಭ್ರಮ: ಪ್ರಧಾನಿ ಮೋದಿ, ಬೊಮ್ಮಾಯಿ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಾದ್ಯಂತ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಕೋರಿದ್ದಾರೆ. 

‘ಗಣರಾಜ್ಯೋತ್ಸವದ ಶುಭಾಶಯಗಳು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಗಣರಾಜ್ಯೋತ್ಸವ ಆಚರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾವು ಒಗ್ಗಟ್ಟಿನಿಂದ ಮುನ್ನಡೆಯಲು ಬಯಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. 

‘26 ಜನವರಿ 1950 ರಂದು ಭಾರತವು ಸಂವಿಧಾನವನ್ನು ಜಾರಿಗೆ ತಂದಿತು. ಇದನ್ನು ನವೆಂಬರ್ 1949 ರಲ್ಲಿ ಮೊದಲು ಅಂಗೀಕರಿಸಲಾಯಿತು. ಜನವರಿ 26ಕ್ಕೆ ಬಹಳ ಮಹತ್ವವಿದೆ. 1930 ರಲ್ಲಿ ಈ ದಿನದಂದು, ಸ್ವಾತಂತ್ರ್ಯ ಚಳುವಳಿಯ ನಾಯಕರು ‘ಪೂರ್ಣ ಸ್ವರಾಜ್’ ಎಂದು ಘೋಷಿಸಿದರು. ತ್ರಿವರ್ಣ ಧ್ವಜವನ್ನು ಹಾರಿಸಿದರು ಎಂದು ಇತಿಹಾಸವನ್ನು ಸ್ಮರಿಸಿ ಶುಭಾಶಯ ಕೋರಿದ್ದಾರೆ’ ಎಂದು ಕೇಂದ್ರ ಹಣಾಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್ ಮಾಡಿದ್ದಾರೆ. 

‘74ನೇ ಗಣರಾಜ್ಯೋತ್ಸವದಂದು ನಿಮ್ಮೆಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ಭಾರತ ಗಣರಾಜ್ಯದ ಏಕತೆ-ಸಮಗ್ರತೆ-ಸಾರ್ವಭೌಮತ್ವ-ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಮೊದಲ ಮೂಲಭೂತ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ವಂದೇ ಮಾತರಂ, ಜೈ ಹಿಂದ್, ಜೈ ಭಾರತ್ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್‌ ಟ್ವೀಟ್ ಮಾಡಿದ್ದಾರೆ.

‘74ನೇ ಗಣರಾಜ್ಯೋತ್ಸವದ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಸಂವಿಧಾನದ ಮೂಲಭೂತ ತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಪರಸ್ಪರ ಭ್ರಾತೃತ್ವ, ಜಾತ್ಯತೀತತೆ ಮತ್ತು ಸಮಾಜವಾದವನ್ನು ರಕ್ಷಿಸುವುದು ನಮಗೆ ಇಂದು ಅತ್ಯಂತ ಅವಶ್ಯಕವಾಗಿದೆ. ಭಾರತಕ್ಕೆ ಜಯವಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

‘ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುತ್ತಾ, ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಿ, ಸದೃಢ ಹಾಗೂ ಸಮರ್ಥ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಭಾರತವು 1950 ರ ಜನವರಿ 26 ರಂದು ಸಂಕಟಗಳನ್ನು ನಿವಾರಿಸಲು ಸಂವಿಧಾನದ ಪ್ರಾರಂಭದ ಮೂಲಕ ಇತಿಹಾಸವನ್ನು ಸೃಷ್ಟಿಸಿತು.ಆದರೆ ಈಗ, ನಾವು ಭಾರತೀಯರು ದೇಶವಿರೋಧಿಗಳಿಂದ ನಮ್ಮ ಸಂವಿಧಾನಕ್ಕೆ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.ಈ ಗಣರಾಜ್ಯ ದಿನದಂದು ನಮ್ಮ ಸಂವಿಧಾನವನ್ನು ಉಳಿಸುವ ಪ್ರತಿಜ್ಞೆ ಮಾಡೋಣ. ಗಣರಾಜ್ಯೋತ್ಸವದ ಶುಭಾಶಯಗಳು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು