ಭಾನುವಾರ, ಮೇ 29, 2022
31 °C

ಮತದಾನ ಕಡ್ಡಾಯವಾಗಬೇಕೆ? ಜನರ ಅಭಿಪ್ರಾಯವೇನು? ಇಲ್ಲಿದೆ ಸಮೀಕ್ಷಾ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ದೇಶದ ಶೇಕಡಾ 86ರಷ್ಟು ಜನರು ಮತದಾನವನ್ನು ಕಡ್ಡಾಯಗೊಳಿಸಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಸ್ಥಳ ಆಧಾರಿತ ಸಾಮಾಜಿಕ ನೆಟ್‌ವರ್ಕ್ ವೇದಿಕೆಯಾದ ‘ಪಬ್ಲಿಕ್ ಆಪ್‌’ ಮೂಲಕ ದೇಶದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಂದ ಸಮೀಕ್ಷೆಗಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಶೇ 80ಕ್ಕೂ ಹೆಚ್ಚು ಮಂದಿ ದೇಶದಲ್ಲಿ ಸದ್ಯ ಇರುವ ಮತದಾನ ಪ್ರಕ್ರಿಯೆಯು ವಿಶ್ವಾಸಾರ್ಹ ಎಂದು ಹೇಳಿದ್ದಾರೆ.

‘ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕೇ ಎಂದು ಕೇಳಿದ ಪ್ರಶ್ನೆಗೆ ಶೇ 86 ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ‘ ಎಂದು ಸಮೀಕ್ಷೆ ಹೇಳಿದೆ.

ಬೇರೆ ನಗರಗಳಲ್ಲಿ ಜೀವನ ನಡೆಸುತ್ತಿರುವುದು ಮತದಾನದಿಂದ ದೂರು ಉಳಿಯುವುದಕ್ಕೆ ಪ್ರಮುಖ ಕಾರಣವೆಂದು ಶೇ. 30.04ರಷ್ಟು ಮಂದಿ ತಿಳಿಸಿದ್ದಾರೆ.

12 ನೇ ರಾಷ್ಟ್ರೀಯ ಮತದಾರರ ದಿನವಾದ ಮಂಗಳವಾರ ಸಮೀಕ್ಷೆ ಬಿಡುಗಡೆಯಾಗಿದೆ.

2011 ರಿಂದ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25 ರಂದು ಆಚರಿಸಲಾಗುತ್ತಿದೆ. ಈ ದಿನ ಭಾರತೀಯ ಚುನಾವಣಾ ಆಯೋಗ ಸ್ಥಾಪನೆಯಾದ ದಿನವೂ (ಜ.25, 1950) ಹೌದು. ಹೊಸ ಮತ್ತು ಯುವ ಮತದಾರರ ನೋಂದಣಿಯನ್ನು ಉತ್ತೇಜಿಸುವುದು ಮತದಾರರ ದಿನದ ಉದ್ದೇಶ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಈ ಸಮೀಕ್ಷೆಯೂ ಬಂದಿದೆ. ಈ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು