ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ನವಮಿಹಿಂಸಾಚಾರ: ಜಾರ್ಖಂಡ್‌ನಲ್ಲಿ ವ್ಯಕ್ತಿ ಸಾವು, ಮಧ್ಯಪ್ರದೇಶದಲ್ಲಿ ಕರ್ಫ್ಯೂ

Last Updated 11 ಏಪ್ರಿಲ್ 2022, 15:53 IST
ಅಕ್ಷರ ಗಾತ್ರ

ಭೋಪಾಲ್‌/ಅಹಮದಾಬಾದ್‌/ರಾಂಚಿ: ದೇಶದ ಕೆಲವೆಡೆ ಭಾನುವಾರದ ರಾಮ ನವಮಿ ಉತ್ಸವದ ವೇಳೆ ಹಿಂಸಾಚಾರ ನಡೆದಿದೆ.

ಜಾರ್ಖಂಡ್‌ನ ಲೋಹಾರ್‌ದಾಗಾದಲ್ಲಿ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು 12 ಜನರು ಗಾಯಗೊಂಡಿದ್ದಾರೆ.ಮಧ್ಯಪ್ರದೇಶದ ಖಾರ್ಗೋನ್‌ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಗಲಭೆ ಸಂಬಂಧ 77 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.ಭಾನುವಾರ ರಾಮ ನವಮಿ ಉತ್ಸವದ ದಿನ ನಡೆದ ಗಲಾಟೆಯಲ್ಲಿ ಆರು ಪೊಲೀಸರು ಸೇರಿ 24 ಜನರಿಗೆ ಗಾಯಗಳಾಗಿವೆ. ಖಾರ್ಗೋನ್‌ನ ಪೊಲೀಸ್‌ ಅಧೀಕ್ಷಕ ಸಿದ್ಧಾರ್ಥ್‌ ಚೌಧರಿ ಅವರಿಗೆ ಗುಂಡು ತಗುಲಿದೆ.

ಗುಜರಾತ್‌ನ ಆನಂದ್‌ ಜಿಲ್ಲೆಯ ಖಂಬತ್‌ ಪ್ರದೇಶದಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟ ಸಂಬಂಧ ಒಂಬತ್ತು ಜನರನ್ನು ಬಂಧಿಸಲಾಗಿದೆ. ಇಲ್ಲಿ ಭಾನುವಾರ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು. ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರ ಪಟ್ಟಣದಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂಧ್ವ ಪಟ್ಟಣದಲ್ಲಿ ರಾಮನ ಉತ್ಸವ ಆಚರಣೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್‌ ಠಾಣಾ ಉಸ್ತುವಾರಿ ಮತ್ತು ಇತರ ಐದು ಜನರು ಗಾಯಗೊಂಡಿದ್ದಾರೆ. ಗಲಭೆ ಈಗ ತಹಬದಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದೂ ಹೇಳಿದ್ದಾರೆ.

ಲೋಹಾರ್‌ದಾಗಾದಲ್ಲಿಯ ಹಿರ್ಹಿ ಗ್ರಾಮದಲ್ಲಿ ಭಾನುವಾರ ಸಂಜೆ ರಾಮ ನವಮಿ ಆಚರಣೆ ಸಂಬಂಧ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು 12 ಜನರಿಗೆ ಗಾಯಗಳಾಗಿವೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದರು.

ಮಧ್ಯಪ್ರದೇಶದ ಖಾರ್ಗೋನ್‌ ನಗರದಲ್ಲಿ ನಡೆದ ಗಲಭೆ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ. ಗಲಭೆಕೋರರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಭರವಸೆ ನೀಡಿದ್ಧಾರೆ.

‘ಹಿಂಸಾಚಾರಕ್ಕೆ ಅಲ್ಪ ಸಂಖ್ಯಾತ ಮುಖಂಡರು ಕಾರಣ’

ಹಿಂಸಾಚಾರಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮತ್ತು ಎಡ ಪಂಕ್ತೀಯ ನಾಯಕರು ಜವಾಬ್ದಾರರು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆರೋಪಿಸಿದ್ದು ಇವರು ತಮ್ಮ ಅನುಯಾಯಿಗಳಿಗೆ ಹಿಂಸಾಚಾರದ ಮಾರ್ಗದಲ್ಲಿ ನಡೆಯಲು ಅನುವು ಮಾಡಿಕೊಡದಂತೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT