ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಭಾರತದ ಎರಡು ಬಿಜೆಪಿ ವಿರೋಧಿ ಸಭೆಗಳ ಸುತ್ತಮುತ್ತ...

ರಾಷ್ಟ್ರ ರಾಜಕಾರಣ: ಬಿಆರ್‌ಎಸ್‌ ಮತ್ತು ಡಿಎಂಕೆ ನಡೆ ಏನು– ಎತ್ತ
Last Updated 5 ಮಾರ್ಚ್ 2023, 6:10 IST
ಅಕ್ಷರ ಗಾತ್ರ

ಚೆನ್ನೈ/ಹೈದರಾಬಾದ್‌ (ಪಿಟಿಐ): ಮುಂಬರುವ 2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮಲ್ಲಿಯೇ ಸ್ಪಷ್ಟತೆ ಇಲ್ಲದಿದ್ದರೂ, ದಕ್ಷಿಣ ಭಾರತದ ಎರಡು ಪ್ರಮುಖ ಬಿಜೆಪಿ ವಿರೋಧಿಗಳಾದ ಬಿಆರ್‌ಎಸ್‌ ಮತ್ತು ಡಿಎಂಕೆ ಜತೆ ಕೈಜೋಡಿಸಲು ಎರಡು ತಿಂಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್ (ಕೆಸಿಆರ್‌) ಅವರು ಈಗಾಗಲೇ ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆ ಪ್ರಕ್ರಿಯೆಗೆ ನೆರವಾಗಲು ತಮ್ಮ ಪಕ್ಷವನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಮರು ನಾಮಕರಣ ಮಾಡಿದ್ದಾರೆ.

ಇನ್ನೊಂದೆಡೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರೂ ತನ್ನ ರಾಷ್ಟ್ರೀಯ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 1ರಂದು ನಡೆದ ತನ್ನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸ್ಟಾಲಿನ್‌, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ವಿರೋಧಿಸಲು ಕಾಂಗ್ರೆಸ್‌ ಸೂಕ್ತ ಎಂದು ಪ್ರತಿಪಾದಿಸಿದ್ದರು. ಅಲ್ಲದೆ ತೃತೀಯ ರಂಗ ರಚನೆಯ ಅಗತ್ಯವನ್ನು ಅವರು ಬಲವಾಗಿ ಅಲ್ಲಗಳೆದಿದ್ದರು.

ತೆಲಂಗಾಣದ ಖಮ್ಮಂನಲ್ಲಿ ಜನವರಿ 18ರಂದು ನಡೆದಿದ್ದ ಬಿಆರ್‌ಎಸ್‌ ಸಭೆಯಲ್ಲಿ, ‘ಮುಂದಿನ ವರ್ಷ ಕೇಂದ್ರ ಸರ್ಕಾರದಲ್ಲಿ ಬದಲಾವಣೆ ಆಗಬೇಕು’ ಎಂಬ ಘೋಷಣೆ ಪ್ರತಿಧ್ವನಿಸಿತ್ತು. ಸ್ಟಾಲಿನ್‌ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಚೆನ್ನೈನಲ್ಲಿ ನಡೆದಿದ್ದ ರ್‍ಯಾಲಿಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಅಗತ್ಯವನ್ನು ಪ್ರತಿಪಾದಿಸಲಾಗಿತ್ತು.

ರ್‍ಯಾಲಿಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು ವಿರೋಧ ಪಕ್ಷಗಳು ಒಂದಾಗಿ ಮುನ್ನುಗ್ಗಬೇಕು ಎಂದು ಒತ್ತಿ ಹೇಳಿದ್ದರು. ‘ಈ ನಿಟ್ಟಿನಲ್ಲಿ ಸ್ಟಾಲಿನ್‌ ಅವರು ಮಹತ್ವದ ಪಾತ್ರ ನಿರ್ವಹಿಸಬೇಕು’ ಎಂದು ಫಾರೂಕ್‌ ಅವರು ಸ್ಟಾಲಿನ್‌ ಪರ ಬ್ಯಾಟಿಂಗ್‌ ಮಾಡಿದ್ದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಕಾಂಗ್ರೆಸ್‌ ಮತ್ತು ಡಿಎಂಕೆ ಎರಡೂ ಸಮಾನವಾದ ಸಾಮಾಜಿಕ ದೃಷ್ಟಿಕೋನ ಹೊಂದಿರುವ ಪಕ್ಷಗಳಾಗಿವೆ’ ಎಂದಿದ್ದರು. ಈ ಮೂಲಕ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಈ ಪಕ್ಷಗಳ ಮೈತ್ರಿಯು ಒಟ್ಟು 40 ಸಂಸದೀಯ ಸ್ಥಾನಗಳನ್ನು ಗೆಲ್ಲುವತ್ತ ಕಣ್ಣಿಟ್ಟಿದೆ ಎಂಬುದನ್ನು ಯಾರಾದರೂ ಊಹಿಸಬಹುದಾಗಿದೆ. 2004ರಲ್ಲಿ ಡಿಎಂಕೆ ಮುಖ್ಯಸ್ಥ ದಿವಂಗತ ಎಂ. ಕರುಣಾನಿಧಿ ಅವರ ನಾಯಕತ್ವದಲ್ಲಿನ ಮೈತ್ರಿಕೂಟವು ಎಲ್ಲ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಪಿಎ–1ರ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರ ರಚನೆಗೆ ಅಗತ್ಯವಿರುವ ಸಂಸದರ ಸಂಖ್ಯೆಯನ್ನು ಹೊಂದಿಸಿಕೊಟ್ಟಿತ್ತು.

ವಿಶ್ಲೇಷಕರು ಹೇಳುವುದೇನು?:

‘ಖಮ್ಮಂನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೆಸಿಆರ್‌ ಅವರು ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದ್ದರು. ಆದರೆ, ಅವರು ಬಿಆರ್‌ಎಸ್‌ನ ಕಾರ್ಯಸೂಚಿಯನ್ನು ವಿವರಿಸಲಿಲ್ಲ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ತಮ್ಮ ರಾಜಕೀಯ ಮೈತ್ರಿ ಅಥವಾ ಸ್ನೇಹಿತರ ಬಗ್ಗೆಯೂ ಸುಳಿವು ನೀಡಲಿಲ್ಲ’ ಎಂದು ರಾಜಕೀಯ ವಿಶ್ಲೇಷಕ ರಾಮು ಸುರವಜ್ಜುಲ ಹೇಳಿದ್ದಾರೆ.

‘ಕೆಸಿಆರ್‌ ಅವರನ್ನು ಭೇಟಿ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಿಪಿಐನ ಹಿರಿಯ ನಾಯಕ ಡಿ.ರಾಜಾ ಸೇರಿದಂತೆ ಯಾರೊಬ್ಬರೂ ಕೆಸಿಆರ್‌ ಅವರನ್ನು ತಮ್ಮ ನಾಯಕ ಎಂದು ಘೋಷಿಸಲಿಲ್ಲ’ ಎಂದು ಅವರು ವಿಶ್ಲೇಷಿಸಿದ್ದಾರೆ.

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕೆಸಿಆರ್‌ ದೂರವಾದರೂ, ಖರ್ಗೆ ಮತ್ತು ಸ್ಟಾಲಿನ್‌ ಅವರು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಉದ್ದೇಶಿಸಿರುವ ಯಾವುದೇ ಒಕ್ಕೂಟವು ಕಾಂಗ್ರೆಸ್‌ ಇಲ್ಲದೇ ಯಶಸ್ವಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಸಂದೇಶ ರವಾನಿಸಿದರು ಎಂದೂ ಅವರು ವಿವರಿಸಿದ್ದಾರೆ.

ಕೆಸಿಆರ್‌ ನೇತೃತ್ವದಲ್ಲಿ ನಡೆದಿದ್ದ ಸಭೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪದಚ್ಯುತಗೊಳಿಸುವ ಬಗ್ಗೆ ಪ್ರತಿಪಾದಿಸಿದ್ದರೆ, ಚೆನ್ನೈ ಸಭೆಯಲ್ಲಿ ಭಾಗವಹಿಸಿದ್ದವರು ಸಾಮಾಜಿಕ ನ್ಯಾಯ ಪರ ಮತ್ತು ಸೈದ್ಧಾಂತಿಕವಾಗಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಆಗ್ರಹಿಸಿದ್ದರು ಎಂದಿದ್ದಾರೆ.

‘ಈ ಎರಡೂ ಗುಂಪುಗಳು 2024ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಸೋಲಿಸಲು ಬಯಸಿವೆ. ಆದರೆ ಯಾರು ಮುನ್ನಡೆಸಬೇಕು ಎಂಬ ಗೊಂದಲದಲ್ಲಿವೆ’ ಎಂದು ಚೆನ್ನೈ ಮೂಲದ ರಾಜಕೀಯ ವಿಶ್ಲೇಷಕ ಸತ್ಯಾಲಯ ರಾಮಕೃಷ್ಣನ್ ವಿಶ್ಲೇಷಿಸಿದ್ದಾರೆ.

‘ಮೈತ್ರಿಕೂಟವನ್ನು ಯಾರು ಮುನ್ನಡೆಸಬೇಕು ಎಂಬುದರ ಕುರಿತು ವಿರೋಧ ಪಕ್ಷಗಳಲ್ಲಿ ಗೊಂದಲಗಳಿವೆ. ಈ ರೀತಿಯ ಗೊಂದಲಗಳು ಮತ್ತು ಅಸಹಕಾರವು ಮೋದಿಯನ್ನು ಮುಂದಿನ ವರ್ಷ ಮೂರನೇ ಬಾರಿಗೆ ತಮ್ಮದೇ ಸರ್ಕಾರ ರಚಿಸಲು ಕಾರಣವಾಗಬಹುದು’ ಎಂದು ಅವರು ಹೇಳಿದ್ದಾರೆ.

‘ಖಮ್ಮಂ ಸಭೆಯ ನಂತರವೂ ಕೆಸಿಆರ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ರಾಷ್ಟ್ರೀಯ ನಾಯಕರು ಆಸಕ್ತಿ ತೋರಿಸಲಿಲ್ಲ. ಆದರೆ ಫಾರೂಕ್‌ ಅಬ್ದುಲ್ಲಾ ಹಾಗೂ ಡಿಎಂಕೆ ನಾಯಕರು ‘ಸ್ಟಾಲಿನ್ ಫಾರ್ ಪಿಎಂ’ ಎಂಬ ಘೋಷಣೆಯನ್ನು ಬೆಂಬಲಿಸಿದ್ದಾರೆ’ ಎಂದು ರಾಮಕೃಷ್ಣನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT