ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ವರ್ಷಗಳ ಬಳಿಕ ವಿದ್ಯುತ್‌ ಕಂಡ ಹಳ್ಳಿ: ಬಲ್ಬ್ ಉರಿದಿದ್ದು ಕಂಡು ಜನರ ಸಂಭ್ರಮ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ‘ಬೆಳಕು‘ ಕಂಡ ಹಳ್ಳಿ
Last Updated 9 ಜನವರಿ 2023, 2:27 IST
ಅಕ್ಷರ ಗಾತ್ರ

ಅನಂತ್‌ನಾಗ್ (ಜಮ್ಮು ಕಾಶ್ಮೀರ): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಗುಡ್ಡಗಾಡು ಪ್ರದೇಶದ ಹಳ್ಳಿಯೊಂದು ‘ಬೆಳಕು‘ ಕಂಡಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ದೂರೂ ಬ್ಲಾಕ್‌ನ ತೆಥಾನ್‌ ಎನ್ನುವ ಗುಡ್ಡಗಾಡು ಹಳ್ಳಿಗೆ ವಿದ್ಯುತ್ ಸೌಲಭ್ಯ ಲಭಿಸಿದೆ.

ಸುಮಾರು 200 ಮಂದಿ ವಾಸ ಇರುವ ಈ ಊರಿಗೆ, ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್‌ ಯೋಜನೆಯಡಿ ವಿದ್ಯುತ್‌ ಸೌಲಭ್ಯ ಲಭಿಸಿದ್ದು, ಸ್ವಾತಂತ್ರ್ಯ ಸಿಕ್ಕಿ ಬರೋಬ್ಬರಿ 75 ವರ್ಷಗಳ ಬಳಿಕ ಇಲ್ಲಿನ ಮನೆಗಳಲ್ಲಿ ಬಲ್ಬ್‌ ಉರಿದಿದೆ.

ಈ ವರೆಗೂ ಮರದ ಕಟ್ಟಿಗೆ ಹಾಗೂ ಕ್ಯಾಂಡಲ್‌ ಬಳಸುತ್ತಿದ್ದ ಜನ, ಇದೀಗ ಮುಕ್ಕಾಲು ಶತಮಾನಗಳ ಬಳಿಕ ಮನೆಯನ್ನು ಬೆಳಗಿದ ವಿದ್ಯುತ್ ದೀಪವನ್ನು ಕಂಡು ಪುಳಕಿತಗೊಂಡಿದ್ದಾರೆ. ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಇದೇ ಮೊದಲ ಬಾರಿಗೆ ನಾವು ವಿದ್ಯುತ್‌ ನೋಡುತ್ತಿದ್ದೇವೆ. ಇನ್ನು ನಮ್ಮ ಮಕ್ಕಳು ವಿದ್ಯುತ್‌ ಬೆಳಕಿನಲ್ಲಿ ಓದಬಹುದು. ಅವರು ಖುಷಿಯಾಗಿದ್ದಾರೆ. ವಿದ್ಯುತ್‌ ಇಲ್ಲದೆ ನಾವು ಹಲವು ಕಷ್ಟ ಅನುಭವಿಸುತ್ತಿದ್ದೆವು. ಈವರೆಗೂ ನಾವು ಕಟ್ಟಿಗೆ ಉಪಯೋಗಿಸುತ್ತಿದ್ದೆವು. ನಮ್ಮ ಸಮಸ್ಯೆ ಈಗ ಬಗೆಹರಿದಿದೆ. ಇದು ಸಾಧ್ಯವಾಗಿಸಿದ ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರಕ್ಕೆ ನಮ್ಮ ಧನ್ಯವಾದಗಳು‘ ಎಂದು ಇಲ್ಲಿನ ನಿವಾಸಿ ಫಝಲ್–ಉ–ದ್ದೀನ್‌ ಖಾನ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

‘ನನಗೀಗ 60 ವರ್ಷ. ಇದೇ ಮೊದಲ ಬಾರಿಗೆ ನಾನು ವಿದ್ಯುತ್‌ ನೋಡಿದ್ದೇನೆ. ನಾವು ಲೆಫ್ಟಿನೆಂಟ್‌ ಗೌವರ್ನರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ ಆಭಾರಿಯಾಗಿದ್ದೇವೆ. ಇಂಧನ ಇಲಾಖೆಗೂ ನಮ್ಮ ಧನ್ಯವಾದಗಳು. ನಮ್ಮ ಹಿಂದಿನ ತಲೆಮಾರು ವಿದ್ಯುತೀಕರಣದ ಪವಾಡವನ್ನು ನೋಡಿಲ್ಲ. ಇಂದು ಸರ್ಕಾರದಿಂದ ವಿದ್ಯುತ್ ಸಂಪರ್ಕ ಲಭಿಸಿದ್ದು ನಮ್ಮ ಭಾಗ್ಯ‘ ಎನ್ನುವುದು ಫಲಾನುಭವಿಗಳಲ್ಲಿ ಒಬ್ಬರಾದ ಝಫರ್ ಖಾನ್‌ ಎಂಬವರ ಮಾತು.

ಜಿಲ್ಲಾ ಕೇಂದ್ರ ಅನಂತ್‌ನಾಗ್‌ನಿಂದ ಈ ಹಳ್ಳಿ 45 ಕಿ.ಮಿ ದೂರದಲ್ಲಿ ಇದ್ದು, ‍‘ಫಾಸ್ಟ್ ಟ್ರಾಕ್‌ ಪ್ರೋಸೆಸ್‌‘ ಮೂಲಕ ಈ ಹಳ್ಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಹಳ್ಳಿಗೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವ ಕಾರ್ಯ 2022ರಲ್ಲಿ ಆಂಭವಾಯ್ತು. ಒಂದು ಟ್ರಾನ್ಸ್‌ಫಾರ್ಮರ್‌, 38 ಹೈ ಟೆನ್ಷನ್‌ ಲೈನ್‌, ಒಟ್ಟು 95 ಕಂಬಗಳನ್ನು ಅಳವಡಿಸಿ ಈ ಗುಡ್ಡಗಾಡು ಪ್ರದೇಶಕ್ಕೆ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 60 ಮನೆಗಳಿಗೆ ಇದರಿಂದ ಪ್ರಯೋಜನ ಆಗಿದೆ ಎನ್ನುವುದು ಇಂಧನ ಇಲಾಖೆ ಅಧಿಕಾರಿಯೊಬ್ಬರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT