ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ನಿಂದ ಕೇಂದ್ರದ ಬೊಕ್ಕಸಕ್ಕೆ ₹2.25 ಲಕ್ಷ ಕೋಟಿ ಉಳಿತಾಯ: ಯುಐಡಿಎಐ ಮುಖ್ಯಸ್ಥ

Last Updated 17 ಡಿಸೆಂಬರ್ 2021, 8:48 IST
ಅಕ್ಷರ ಗಾತ್ರ

ನವದೆಹಲಿ: ಅನಧಿಕೃತ ಫಲಾನುಭವಿಗಳನ್ನು ವ್ಯವಸ್ಥೆಯಿಂದ ದೂರ ಉಳಿಸುವಲ್ಲಿ ಆಧಾರ್ ಯಶಸ್ವಿಯಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹2.25 ಲಕ್ಷ ಕೋಟಿ ಉಳಿತಾಯವಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ಹಣಾಧಿಕಾರಿ ಸೌರಭ್‌ ಗರ್ಗ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ 300 ಕಾರ್ಯಯೋಜನೆಗಳು ಮತ್ತು ರಾಜ್ಯ ಸರ್ಕಾರಗಳ 400 ಕಾರ್ಯಯೋಜನೆಗಳನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಸಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗಳ (ಡಿಬಿಟಿ) ಮೂಲಕ ಹಣ ಸಂದಾಯ ಮಾಡಿದ್ದು, ಸರ್ಕಾರಕ್ಕೆ ₹2.25 ಲಕ್ಷ ಕೋಟಿ ಉಳಿತಾಯವಾಗಿದೆ. ಇದು ಕೇಂದ್ರ ಸರ್ಕಾರದ ಕಾರ್ಯಯೋಜನೆಗಳಿಗೆ ಸಂಬಂಧಿಸಿದಂತೆ ಉಳಿತಾಯವಾಗಿರುವ ಮೊತ್ತ ಎಂದು ಸೌರಭ್‌ ಗರ್ಗ್‌ ಮಾಹಿತಿ ನೀಡಿರುವುದಾಗಿ ಎಎನ್ಐ ಟ್ವೀಟಿಸಿದೆ.

ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದನ್ನು ಆಧಾರ್‌ ಮತ್ತಷ್ಟು ಸುಲಭಗೊಳಿಸಿದೆ. ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಧಾರ್‌ ಸಹಕಾರದಿಂದ ಸರ್ಕಾರವು ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ತೆರಳದೆಯೇ ಮೈಕ್ರೊ ಎಟಿಎಂಗಳ ಮೂಲಕ ಹಣ ತೆಗೆಯಲು ನೆರವಾಗಿರುವುದಾಗಿ ಗರ್ಗ್‌ ಹೇಳಿದ್ದಾರೆ.

2010ರ ಸೆಪ್ಟೆಂಬರ್‌ 29ರಂದು ನಾವು ಮೊದಲ ಆಧಾರ್‌ ಸಂಖ್ಯೆಯನ್ನು ಗೊತ್ತುಪಡಿಸಿದೆವು. ನಾವು ಈಗ ಹತ್ತಕ್ಕೂ ಹೆಚ್ಚು ವರ್ಷಗಳನ್ನು ಮುಟ್ಟಿದ್ದೇವೆ. ಈವರೆಗೂ 131 ಕೋಟಿ ಆಧಾರ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ. ನಾವು ಮುಂದಿನ 10 ವರ್ಷಗಳಲ್ಲಿ ಏನು ಮಾಡಬಹುದು ಎಂಬುದನ್ನು ನಿರ್ಧರಿಸಿದ್ದೇವೆ. ಆಧಾರ್‌ 2.0 ಬಗ್ಗೆ ಚರ್ಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಯುಐಡಿಎಐ ಮಾರ್ನಾಲ್ಕು ವಿಷಯಗಳ ಕಡೆಗೆ ಗಮನ ಕೇಂದ್ರೀಕರಿಸಲಿದೆ ಎಂದಿದ್ದಾರೆ.

ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು ಅನುವು ಮಾಡಿಕೊಡುವ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಇತ್ತೀಚೆಗೆ ವರದಿಯಾಗಿದೆ.

ಯುಐಡಿಎಐ ಯೋಜನೆಗಳು ಹೀಗಿವೆ...

* ಜನರು ಮನೆಯಲ್ಲಿಯೇ ಕುಳಿತು ಕಂಪ್ಯೂಟರ್‌ ಮುಖೇನ ದಾಖಲೆಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆ ಮಾಡುವುದು.
* 1.5 ಲಕ್ಷ ಪೋಸ್ಟ್‌ಮನ್‌ಗಳು ಗ್ರಾಮಗಳಲ್ಲಿ ಸಂಚರಿಸಿ ಆಧಾರ್‌ ನೋಂದಣಿ ಮತ್ತು ಅಪ್‌ಡೇಟ್‌ ಮಾಡಲಿದ್ದಾರೆ.
* ದೇಶದಲ್ಲಿ 6.5 ಲಕ್ಷ ಗ್ರಾಮಗಳಿಗೆ ಸಹಕಾರಿಯಾಗಲು 50,000 ಆಧಾರ್‌ ಕೇಂದ್ರಗಳ ಸ್ಥಾಪನೆ.
* ಸ್ಮಾರ್ಟ್‌ಫೋನ್‌ನಲ್ಲೇ ಆಧಾರ್‌ಗೆ ದಾಖಲೆ ಅಪ್‌ಡೇಟ್‌ ಮಾಡಲು ಆ್ಯಪ್‌ ವಿನ್ಯಾಸ.
* ಆಧಾರ್‌ ಅನ್ನು ಪ್ಯಾನ್‌ ಸಂಖ್ಯೆ, ಮೊಬೈಲ್‌ ಸಿಮ್‌ ಕಾರ್ಡ್‌ಗಳು, ರೇಷನ್‌ ಕಾರ್ಡ್‌ಗಳು, ಬ್ಯಾಂಕ್‌ ಖಾತೆಗಳೊಂದಿಗೆ ಜೋಡಿಸುವುದರ ಬಗ್ಗೆ ಗಮನ.
* ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್‌ ಹಾಗೂ ಮೆಷಿನ್‌ ಲರ್ನಿಂಗ್‌ ತಂತ್ರಜ್ಞಾನಗಳನ್ನು ಬಳಸಿಕೊಂಡು ಆಧಾರ್‌ ಅನ್ನು ಮತ್ತಷ್ಟು ಸುರಕ್ಷಿತಗೊಳಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT