ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪಿಗಳ ಮೆಚ್ಚಿನ ‘ವಾಷಿಂಗ್‌ ಮೆಷಿನ್‌’ ಬಿಜೆಪಿ: ಎಎಪಿ ವ್ಯಂಗ್ಯ

Last Updated 28 ಫೆಬ್ರುವರಿ 2023, 13:34 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವುದಕ್ಕೆ ಆಕ್ರೋಶಗೊಂಡಿರುವ ಆಮ್‌ ಆದ್ಮಿ ಪಕ್ಷ, ಬಿಜೆಪಿಯ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಹಗರಣಗಳು, ಅತ್ಯಾಚಾರ ಆರೋಪಿಗಳು, ಕೊಲೆ ಆರೋಪ ಎದುರಿಸುತ್ತಿರುವ ನಾಯಕರಿಗೆ ಬಿಜೆಪಿಯು ‘ವಾಷಿಂಗ್ ಮೆಷಿನ್’ ಎಂದು ಲೇವಡಿ ಮಾಡಿದೆ.

ಬಿಜೆಪಿಗೆ ಸೇರುವ ಮೊದಲು ವಿವಿಧ ಪ್ರಕರಣಗಳಲ್ಲಿ ಸಿಲುಕಿದ್ದ ನಾಯಕರ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅವರನ್ನು ‘ಸಂತೃಪ್ತ ಗ್ರಾಹಕರು’ ಎಂದು ಹೀಯಾಳಿಸಿದೆ. ಇವರೆಲ್ಲರೂ ಸಿಬಿಐ-ಇಡಿ ದಾಳಿಗಳಿಲ್ಲದ ವಿಶೇಷ ಬೋನಸ್ ಪಡೆದಿರುವುದಾಗಿ ವ್ಯಂಗ್ಯ ಮಾಡಿದೆ.

‘ಪಾಪಿಗಳ ಆಯ್ಕೆ ಬಿಜೆಪಿ, ವಾಷಿಂಗ್‌ ಮೆಷಿನ್‌ ಬಿಜೆಪಿ’ ಎಂದು ಘೋಷಣೆಯನ್ನು ಎಎಪಿ ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ವಿವಿಧ ಆರೋಪಗಳನ್ನು ಎದುರಿಸಿದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವಾ ಶರ್ಮಾ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ತನಿಖೆಯಿಂದ ಮುಕ್ತರಾಗಿರುವ ಕುರಿತ ಪೋಸ್ಟರ್‌ ಅನ್ನೂ ಎಎಪಿ ಹಂಚಿಕೊಂಡಿದೆ.

ಕೆಲವು ಶಾಸಕರೊಂದಿಗೆ ಬಿಜೆಪಿ ಸೇರಿದರೆ ತನಗೆ ಮುಖ್ಯಮಂತ್ರಿ ಸ್ಥಾನದ ಆಮಿಷ ಒಡ್ಡಲಾಗಿತ್ತು ಎಂದು ಸಿಸೋಡಿಯಾ ಅವರು ಕಳೆದ ವರ್ಷ ಆರೋಪಿಸಿದ್ದರು. ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ ತನ್ನ ವಿರುದ್ಧದ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ರದ್ದುಗೊಳಿಸುವುದಾಗಿ ತಿಳಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 26ರಂದು ಸಿಸೋಡಿಯಾ ಅವರನ್ನು ಸತತ 8 ಗಂಟೆಗಳ ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ನಿನ್ನೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಕೆ.ನಾಗ್ಪಾಲ್, ಸಿಸೋಡಿಯಾ ಅವರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದರು.

ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರು ಅಬಕಾರಿ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ 17ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲ ಅವರ ಮನೆ ಮತ್ತು ಬ್ಯಾಂಕ್ ಲಾಕರ್‌ಗಳನ್ನೂ ಶೋಧಿಸಲಾಗಿತ್ತು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಎಎಪಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ತಿಹಾರ್‌ ಜೈಲಿನಲ್ಲಿದ್ದಾರೆ.

ಜೈನ್‌ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT