ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಎಎಪಿಗೆ 58 ಸ್ಥಾನ: ಪಕ್ಷದ ಆಂತರಿಕ ಸಮೀಕ್ಷೆ

Last Updated 4 ಏಪ್ರಿಲ್ 2022, 13:02 IST
ಅಕ್ಷರ ಗಾತ್ರ

ನವದೆಹಲಿ: ‘ಈ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷ 58 ಸ್ಥಾನಗಳನ್ನು ಗೆಲ್ಲಬಹುದು ಎಂದು ನಮ್ಮ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ಎಎಪಿಯ ಗುಜರಾತ್‌ ಉಸ್ತುವಾರಿ, ಡಾ. ಸಂದೀಪ್‌ ಪಾಠಕ್‌ ಸೋಮವಾರ ಹೇಳಿದ್ದಾರೆ.

‘ಪಕ್ಷದ ಸ್ವಂತ ಸಂಸ್ಥೆ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿದೆ’ ಎಂದು ಪಾಠಕ್ ತಿಳಿಸಿದರು. ‘ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಬಗ್ಗೆ ಅತೃಪ್ತರಾಗಿರುವ ಗ್ರಾಮೀಣ ಮತದಾರರು ಮತ್ತು ನಗರ ಪ್ರದೇಶಗಳಲ್ಲಿನ ಕೆಳ ಮತ್ತು ಮಧ್ಯಮ ವರ್ಗದ ಮತದಾರರು ಎಎಪಿಯನ್ನು ಬೆಂಬಲಿಸುವ ಸಾಧ್ಯತೆಗಳಿವೆ’ ಎಂದು ಅವರು ಹೇಳಿದರು.

‘ನಮ್ಮ ಆಂತರಿಕ ಸಮೀಕ್ಷೆಯ ಪ್ರಕಾರ, ಗುಜರಾತ್‌ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಾವು 58 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಗ್ರಾಮೀಣ ಗುಜರಾತ್‌ನ ಜನರು ನಮಗೆ ಮತ ಹಾಕಲಿದ್ದಾರೆ. ನಗರ ಪ್ರದೇಶದ ಕೆಳ ಮತ್ತು ಮಧ್ಯಮ ವರ್ಗದವರು ಬದಲಾವಣೆ ಬಯಸಿದ್ದು, ಅವರೂ ಕೂಡ ನಮಗೆ ಮತ ಹಾಕುತ್ತಾರೆ. ಸಮಯ ಕಳೆದಂತೆ ನಮ್ಮ ಸಂಖ್ಯೆಯು ಹೆಚ್ಚಾಗಲಿದೆ’ ಎಂದು ಪಾಠಕ್ ಹೇಳಿದರು.

ಗುಜರಾತ್‌ನ ಬಿಜೆಪಿ ಸರ್ಕಾರ ಗುಪ್ತಚರ ಇಲಾಖೆ ಮೂಲಕ ನಡೆಸಿದ ಸಮೀಕ್ಷೆಯಲ್ಲೂ ಎಎಪಿಗೆ 55 ಸ್ಥಾನಗಳು ಸಿಗಲಿವೆ ಎಂದು ಉಲ್ಲೇಖಿಸಲಾಗಿದೆ ಎಂದು ಪಾಠಕ್ ತಿಳಿಸಿದರು.

ಗುಪ್ತಚರ ಇಲಾಖೆ ನಡೆಸಿರುವ ಸಮೀಕ್ಷೆಯ ವರದಿ ಬಗ್ಗೆ ನಮಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ಎಎಪಿಯ ಗುಜರಾತ್ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಈ ಹಿಂದೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು.

ಗುಜರಾತ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ, ಎಎಪಿಯಿಂದ ಮಾತ್ರ ಸಾಧ್ಯ ಎಂದು ಜನರಿಗೆ ಅರ್ಥವಾಗಿದೆ ಎಂದೂ ಪಾಠಕ್‌ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರಲ್ಲಿ ಪಾಠಕ್‌ ಕೂಡ ಒಬ್ಬರು.

ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುಜರಾತ್‌ನಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡು, ರೋಡ್‌ ಶೋ ಸೇರಿದಂತೆ ಹಲವು ಕಾಯಕ್ರಮಗಳಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT