ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಚುನಾವಣೆ: ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಂದು ಘೋಷಣೆ

Last Updated 4 ನವೆಂಬರ್ 2022, 5:42 IST
ಅಕ್ಷರ ಗಾತ್ರ

ಅಹಮದಾಬಾದ್: ಮುಂಬರುವ ಗುಜರಾತ್‌ ವಿಧಾನಸಭೆ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಜನಾಭಿಪ್ರಾಯ ಆಧರಿಸಿ ಇಂದು (ನ.4) ಘೋಷಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ.

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಜನರು ಎಸ್‌ಎಂಎಸ್‌, ವಾಟ್ಸ್‌ಆ್ಯಪ್‌, ವಾಯ್ಸ್‌ ಮೇಲ್‌ ಮತ್ತು ಇ–ಮೇಲ್‌ ಮೂಲಕ ಅಭಿಪ್ರಾಯ ತಿಳಿಸುವಂತೆ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಅಕ್ಟೋಬರ್‌ 29ರಂದು ಕರೆ ನೀಡಿದ್ದರು. ನವೆಂಬರ್‌ 4ರಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಜನರು ನವೆಂಬರ್‌ 3ರ ಸಂಜೆಯೊಳಗೆ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದರು.

ಎಎಪಿ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದಾನ್ ಗಧ್ವಿ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮನೋಜ್‌ ಸೊರಾಥಿಯಾ ಸಿಎಂ ಸ್ಥಾನದ ರೇಸ್‌ನಲ್ಲಿದ್ದಾರೆ.

ಕೇಜ್ರಿವಾಲ್‌ ಅವರು ಇಂದು ಅಹಮದಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಪ್ರಕಟಿಸಲಿದ್ದಾರೆ ಎಂದು ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.

ದೆಹಲಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್‌,'ಜನಾಭಿಪ್ರಾಯದ ಫಲಿತಾಂಶವನ್ನುನವೆಂಬರ್‌ 4ರಂದು ಪ್ರಕಟಿಸಲಾಗುವುದು. ಪಂಜಾಬ್‌ ಚುನಾವಣೆ ವೇಳೆ ಜನಾಭಿಪ್ರಾಯ ಕೇಳಿದ್ದವು. ಹೆಚ್ಚಿನ ಸಂಖ್ಯೆಯ ಜನರು ಭಗವಂತ ಮಾನ್‌ ಹೆಸರು ಸೂಚಿಸಿದ್ದರು. ಅವರ ಅಭಿಪ್ರಾಯದಂತೆ ಮಾನ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ' ಎಂದು ಕಳೆದ ವಾರ ಹೇಳಿದ್ದರು.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್‌ 1 ಹಾಗೂ 5ರಂದುಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಎಎಪಿ ಈವರೆಗೆ 118 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಉಳಿದ ಕ್ಷೇತ್ರಗಳಿಗೆ ಇನ್ನಷ್ಟೇ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT