ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ರಾಷ್ಟ್ರೀಯ ಪಕ್ಷದ ಮನ್ನಣೆ

ಈ ಗೌರವ ಪಡೆದ ದೇಶದ ಒಂಬತ್ತನೇ ಪಕ್ಷವೆಂಬ ಹಿರಿಮೆ
Last Updated 8 ಡಿಸೆಂಬರ್ 2022, 14:28 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಸಾಧನೆ ತೋರಿರುವ ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆಯುವುದು ಖಾತರಿಯಾಗಿದೆ. ಇದರೊಂದಿಗೆ ಈ ಸ್ಥಾನಮಾನಕ್ಕೆ ಭಾಜನವಾದ ದೇಶದ ಒಂಬತ್ತನೇ ಪಕ್ಷ ಎಂಬ ಹಿರಿಮೆಯನ್ನು ಆಪ್‌ ತನ್ನದಾಗಿಸಿಕೊಳ್ಳಲಿದೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಆರ್‌ಎಸ್‌ ಮತ್ತು ಅದರ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ಅವರಂತೆಕಾಂಗ್ರೆಸೇತರ ವಿರೋಧ ಪಕ್ಷಗಳ ಪ್ರಮುಖ ನಾಯಕ ಎಂಬ ಮನ್ನಣೆ ಗಳಿಸಲುಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್‌ ಅವರಿಗೆ ಇದರಿಂದ ಅನುಕೂಲವಾಗಲಿದೆ.

ನಾಲ್ಕು ರಾಜ್ಯಗಳಲ್ಲಿ ‘ರಾಜ್ಯ ಪಕ್ಷ’ದ ಮನ್ನಣೆ ಗಳಿಸುವ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆಯಲಿದೆ.ಐದು ಸ್ಥಾನಗಳನ್ನು ಗೆಲ್ಲುವ ಜೊತೆಗೆ ಸರಿಸುಮಾರು ಶೇ 13ರಷ್ಟು ಮತ ಪಡೆದಿರುವ ಎಎಪಿಗೆ ಗುಜರಾತ್‌ನಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ದೊರೆಯುವುದು ನಿಶ್ಚಯವಾಗಿದೆ. ಇದರೊಂದಿಗೆ ನಾಲ್ಕು ರಾಜ್ಯಗಳಲ್ಲಿ ಈ ಸ್ಥಾನಮಾನ ಪಡೆದಂತಾಗಲಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಈ ಪಕ್ಷ ಗೋವಾದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.

ಸದ್ಯ ಬಿಜೆಪಿ, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ, ಬಿಎಸ್‌ಪಿ ಹಾಗೂ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ರಾಷ್ಟ್ರೀಯ ಪಕ್ಷದ ಮಾನ್ಯತೆ ಹೊಂದಿವೆ.

ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಮಾನ್ಯತೆ ಅಧಿಕೃತಗೊಳಿಸಿದ ಬಳಿಕ ಎಎಪಿಯು ‘‍ಪೊರಕೆ’ ಚಿಹ್ನೆಯೊಂದಿಗೆ ದೇಶದಾದ್ಯಂತ ಚುನಾವಣಾ ಕಣಕ್ಕಿಳಿಯಬಹುದಾಗಿದೆ. ಆಗ ‘ಪೊರಕೆ’ಯ ಚಿಹ್ನೆಯನ್ನು ಬೇರೆ ಯಾರಿಗೂ ನೀಡಲಾಗುವುದಿಲ್ಲ.

ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗುವುದಿಲ್ಲ ಎಂಬುದನ್ನು ಅರಿತಿದ್ದ ಎಎಪಿಯು ಗುಜರಾತ್‌ ಚುನಾವಣೆಯತ್ತ ಹೆಚ್ಚಿನ ಗಮನ ಹರಿಸಿತ್ತು. ಇದರಿಂದ ಪಕ್ಷಕ್ಕೆ ಅಧಿಕ ಪ್ರಯೋಜನವಾಗಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ಇದ್ದಿದ್ದರೆ ಗುಜರಾತ್‌ನಲ್ಲಿ ಪಕ್ಷದ ಸಾಧನೆ ಮತ್ತಷ್ಟು ಉತ್ತಮವಾಗಿರುತ್ತಿತ್ತು ಎಂದು ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ರಾಷ್ಟ್ರೀಯ ಪಕ್ಷದ ಮನ್ನಣೆ ಗಳಿಸಲಿದ್ದೇವೆ. ಗುಜರಾತ್‌ ಜನ ನಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸಿದ್ದಾರೆ. ಕೆಲವೇ ಕೆಲವು ಪಕ್ಷಗಳಿಗೆ ಈ ಮಾನ್ಯತೆ ಲಭಿಸಿದೆ.

–ಅರವಿಂದ ಕೇಜ್ರಿವಾಲ್‌, ಎಎಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT