ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಹತ್ಯೆ ಪ್ರತಿಭಟಿಸಿ ಎಎಪಿ ರ್‍ಯಾಲಿ: ಬಿಜೆಪಿ ವಿರುದ್ಧ ಆಕ್ರೋಶ

Last Updated 5 ಜೂನ್ 2022, 9:23 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎಎಪಿ ಆಗ್ರಹಿಸಿದೆ.

‘ಜನ ಆಕ್ರೋಶ ರ್‍ಯಾಲಿ’ಯಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಪರಿಸರ ಸಚಿವ ಗೋಪಾಲ್ ರೈ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಇತರ ಶಾಸಕರು ಹಾಗೂ ಎಎಪಿ ಕಾರ್ಯಕರ್ತರು ಭಾಗಿಯಾಗಿದ್ದು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಿದರು.

ಕಾಶ್ಮೀರ ಕಣಿವೆಯಲ್ಲಿ ಲಷ್ಕರ್–ಎ–ತಯಬಾ ಸೇರಿದಂತೆ ಉಗ್ರ ಸಂಘಟನೆಗಳು ಇತ್ತೀಚೆಗೆ 8 ಮಂದಿಯನ್ನು ಹತ್ಯೆ ಮಾಡಿವೆ. ಇದರಲ್ಲಿ ಮುಸ್ಲಿಮೇತರರು, ಭದ್ರತಾ ಸಿಬ್ಬಂದಿ, ಒಬ್ಬ ಕಲಾವಿದ ಹಾಗೂ ಸ್ಥಳೀಯ ನಾಗರಿಕರು ಸೇರಿದ್ದಾರೆ.

ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿ 2012ರ ಬಳಿಕ ಸರ್ಕಾರಿ ಉದ್ಯೋಗ ಪಡೆದುಕೊಂಡ ಕಾಶ್ಮೀರಿ ಪಂಡಿತರು ಸಹ ರಕ್ಷಣೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 12ರಂದು ಬುಡ್ಗಾಂ ಜಿಲ್ಲೆಯ ಚದೂರದಲ್ಲಿರುವ ಸರ್ಕಾರಿ ಕಚೇರಿಯೊಳಗೆಯೇ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಕಾಶ್ಮೀರಿ ಪಂಡಿತರ ಪ್ರತಿಭಟನೆ ತೀವ್ರಗೊಂಡಿದೆ.

‘1990ರಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಕೇಂದ್ರದಲ್ಲಿದ್ದಾಗಲೇ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿಗಳು ನಡೆದಿದ್ದವು. ಇದೀಗ ಪೂರ್ಣ ಬಹುಮತದ ಬಿಜೆಪಿ ಸರ್ಕಾರವಿರುವಾಗಲೇ ಕಾಶ್ಮೀರಿ ಪಂಡಿತರನ್ನು ಬಲವಂತದಿಂದ ಕಣಿವೆ ತೊರೆಯುವಂತೆ ಮಾಡಲಾಗುತ್ತಿದೆ’ ಎಂದು ಎಎಪಿಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ಕಾಶ್ಮೀರಿ ಪಂಡಿತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಎಎಪಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT