ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲೂ ಶಿಕ್ಷಣ, ಆರೋಗ್ಯ ಸೇವೆ ಉಚಿತ: ಸಿಸೋಡಿಯಾ

Last Updated 22 ಆಗಸ್ಟ್ 2022, 20:00 IST
ಅಕ್ಷರ ಗಾತ್ರ

ಅಹಮದಾಬಾದ್‌: ಎಎಪಿ ಅಧಿಕಾರಕ್ಕೆ ಬಂದರೆ, ದೆಹಲಿಯಲ್ಲಿ ಇರುವ ಹಾಗೆಯೇ ಗುಜರಾತ್‌ನಲ್ಲಿ ಕೂಡ ಗುಣಮಟ್ಟದ ಶಿಕ್ಷಣ ಮತ್ತು‍ ಉತ್ತಮ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಮವಾರ ಭರವಸೆ ಕೊಟ್ಟಿದ್ದಾರೆ.

ಗುಣಮಟ್ಟದ ಶಿಕ್ಷಣವು ಗುಜರಾತ್‌ನ ಪ್ರತಿ ಮಗುವಿನ ಹಕ್ಕು. ಗ್ರಾಮದಲ್ಲಿ ಇರಲಿ ಅಥವಾ ನಗರದಲ್ಲಿರಲಿ, ಸರ್ಕಾರಿ ಶಾಲೆಯಲ್ಲಿ ಕಲಿಯಲಿ ಅಥವಾ ಖಾಸಗಿ ಶಾಲೆಯಲ್ಲಿ ಕಲಿಯಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಸಿಸೋಡಿಯಾ ಹೇಳಿದ್ದಾರೆ. ದೆಹಲಿಯ ಶಿಕ್ಷಣ ಇಲಾಖೆಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ.

ಅಧಿಕಾರಕ್ಕೆ ಬಂದರೆ ಗ್ರಾಮಗಳು ಮತ್ತು ವಾರ್ಡ್‌ ಮಟ್ಟದಲ್ಲಿ ಮೊಹಲ್ಲಾ ಕ್ಲಿನಿಕ್‌ ಸ್ಥಾಪಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಿ, ಖಾಸಗಿ ಆಸ್ಪತ್ರೆಗೆ ಪೈಪೋಟಿ ಒಡ್ಡಲಾಗುವುದು ಎಂದು ಅರವಿಂದ ಕೇಜ್ರಿವಾಲ್ ಅವರು ಮಾಧ್ಯಮ
ಗೋಷ್ಠಿಯಲ್ಲಿ ಹೇಳಿದ್ದಾರೆ.

ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ₹1 ಲಕ್ಷದಿಂದ ₹1 ಕೋಟಿಗೆ
ಹೆಚ್ಚಿಸಲಾಗುವುದು ಎಂದು ಗುಜರಾತ್‌ನಲ್ಲಿ ಪ್ರತಿಭಟನೆ
ನಡೆಸುತ್ತಿದ್ದ ಮಾಜಿ ಸೈನಿಕರಿಗೆ ಎರಡು ತಿಂಗಳ ಹಿಂದೆ ಭರವಸೆ ಕೊಟ್ಟಿದ್ದೆ. ಗುಜರಾತ್‌ ಸರ್ಕಾರವು ಈಗ ಪರಿಹಾರವನ್ನು ₹1 ಕೋಟಿಗೆ ಹೆಚ್ಚಿಸಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕೇಜ್ರಿವಾಲ್‌ ಅವರು ಇತ್ತೀಚಿನ ದಿನಗಳಲ್ಲಿ ಹಲವು ಬಾರಿ
ಗುಜರಾತ್‌ಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್‌ ವರೆಗೆ ಉಚಿತ ವಿದ್ಯುತ್‌, ನಿರುದ್ಯೋಗಿಗಳಿಗೆ ತಿಂಗಳಿಗೆ ₹3,000 ಭತ್ಯೆ ಮುಂತಾದ ಭರವಸೆಗಳನ್ನೂ ಅವರು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಕೇಜ್ರಿವಾಲ್‌ ನೇತೃತ್ವದ ಎಎಪಿ ಈ ರಾಜ್ಯದ ಮೇಲೆ ಗಮನ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT