ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಎಎಪಿ ಸರ್ಕಾರ, ಜನವರಿ 31ರ ಬಳಿಕ ಹಳೇ ಪಿಂಚಣಿ ಯೋಜನೆ: ಕೇಜ್ರಿವಾಲ್

Last Updated 27 ನವೆಂಬರ್ 2022, 10:10 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಗೆಲುವು ಸಾಧಿಸಲಿದ್ದು, ಸರ್ಕಾರ ರಚಿಸುವುದು ನಿಶ್ಚಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಲಿಖಿತ ಪ್ರತಿಪಾದನೆ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 31ರ ಬಳಿಕ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿರುವ ಕೇಜ್ರಿವಾಲ್, ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.

ಸೂರತ್‌ನಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ದೆಹಲಿ ಮತ್ತು ಪಂಜಾಬ್‌ನಲ್ಲಿ ತಮ್ಮ ಭವಿಷ್ಯವಾಣಿ ನಿಜವಾಗಿದ್ದು, ಗುಜರಾತ್‌ನಲ್ಲಿಯೂ ಅದೇರೀತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಗುಜರಾತ್‌ನಲ್ಲಿ ಬಿಜೆಪಿ ಆಡಳಿತದ ಬಗ್ಗೆ ಭಯಗೊಂಡಿರುವ ಜನರು, ಎಎಪಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.

'ನಿಮ್ಮೆಲ್ಲರ ಮುಂದೆ ನನ್ನ ಭವಿಷ್ಯವಾಣಿ ಬರೆಯುತ್ತಿದ್ದೇನೆ. ಬರೆದಿಟ್ಟುಕೊಳ್ಳಿ, ಎಎಪಿಯು ಗುಜರಾತ್‌ನಲ್ಲಿ ಸರ್ಕಾರ ರಚಿಸಲಿದೆ. 27 ವರ್ಷಗಳ ದುರಾಡಳಿತದ ನಂತರ ಗುಜರಾತ್‌ನ ಜನರು ಬಿಜೆಪಿಯಿಂದ ಮುಕ್ತಿ ಪಡೆಯಲಿದ್ದಾರೆ' ಎಂದಿದ್ದಾರೆ.

ಪತ್ರದ ಮೇಲೆ ತಮ್ಮ ಭವಿಷ್ಯವಾಣಿಯನ್ನು ಬರೆದ ಕೇಜ್ರಿವಾಲ್, ಮಾಧ್ಯಮದವರತ್ತ ಪ್ರದರ್ಶಿಸಿದ್ದಾರೆ.

ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅವರು, ಹಳೇ ಪಿಂಚಣಿ ನೀತಿ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಎದುರು ನೋಡುತ್ತಿರುವ ಸರ್ಕಾರಿ ನೌಕರರು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

2005ರ ಏಪ್ರಿಲ್‌ 1 ಅಥವಾ ಅದರ ಬಳಿಕ ಕೆಲಸಕ್ಕೆ ಸೇರಿರುವವರಿಗೆ ಗುಜರಾತ್‌ ಸರ್ಕಾರ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿ ಮಾಡಿದೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT