ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಪ್ರಕರಣ: ಜಯಾ ಠಾಕೂರ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Last Updated 15 ಫೆಬ್ರುವರಿ 2023, 10:42 IST
ಅಕ್ಷರ ಗಾತ್ರ

ನವದೆಹಲಿ: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿಗಳ ವಿರುದ್ಧ ನ್ಯಾಯಾಧೀಶರ ಸುಪರ್ದಿಯಲ್ಲಿ ತನಿಖೆ ನಡೆಸಲು ಕೋರಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ಸಲ್ಲಿಸಿದ್ದ ಪಿಐಎಲ್ ಕುರಿತು ಫೆ. 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಶೀಘ್ರ ವಿಚಾರಣೆ ಕೋರಿ ಜಯಾ ಠಾಕೂರ್ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಾಧೀಶ ಪಿ.ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಪರಿಗಣಿಸಿದೆ.

ಅದಾನಿ ಸಮೂಹದ ಕಂಪನಿಗಳು ಹಾಗೂ ಅವರ ಸಹವರ್ತಿಗಳು ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಹೀಗಾಗಿ ಸಮೂಹದ ಕಂಪನಿಗಳ ವಿರುದ್ಧ ಸಿಬಿಐ, ಇ.ಡಿ., ಡಿಆರ್‌ಐ, ಸಿಬಿಡಿಟಿ, ಇಐಬಿ, ಎನ್‌ಸಿಬಿ, ಸೆಬಿ, ಆರ್‌ಬಿಐ, ಎಸ್‌ಎಫ್‌ಐಒಗಳಿಂದ ತನಿಖೆ ನಡೆಸಬೇಕು. ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದೂ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅದಾನಿ ಎಂಟರ್‌ಪ್ರೈಸಸ್‌ನ ಷೇರು ಮಾರಾಟ ಪ್ರಕ್ರಿಯೆಯಲ್ಲಿ ಎಲ್‌ಐಸಿ ಹಾಗೂ ಎಸ್‌ಬಿಐ, ಸಾರ್ವಜನಿಕರ ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿವೆ. ಹೀಗಾಗಿ, ಈ ಹೂಡಿಕೆಗೆ ಸಂಬಂಧಿಸಿದಂತೆ ಎಲ್‌ಐಸಿ ಹಾಗೂ ಎಸ್‌ಬಿಐಗಳ ಪಾತ್ರ ಕುರಿತ ಕೂಡ ತನಿಖೆ ನಡೆಯಬೇಕು ಎಂದು ಅವರು ಕೋರಿದ್ದಾರೆ.

ಅದಾನಿ ಸಮೂಹವು ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಮತ್ತು ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ ಎಂದು ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಆರೋಪಿಸಿದೆ. ವರದಿ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಂಡಿತ್ತು.

ಸಂಸತ್ತಿನಲ್ಲೂ ವಿಪಕ್ಷಗಳು ಜೆಪಿಸಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಆಗ್ರಹಿಸಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಿರುವುದನ್ನು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.

ಎಲ್‌ಐಐಸಿ, ಎಸ್‌ಬಿಐ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು, ಅದಾನಿ ಸಮೂಹದಲ್ಲಿ ಭಾರಿ ಹೂಡಿಕೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸೇರಿದ ಹಣದ ಹಗರಣದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT