ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದ್ಧಾಂತಿಕ ಸಂಘರ್ಷಕ್ಕಿಳಿಯದಂತೆ ರವಿಗೆ ತಿಳಿಸಿ: ರಾಷ್ಟ್ರಪತಿಗೆ ಸ್ಟಾಲಿನ್ ಪತ್ರ

Last Updated 13 ಜನವರಿ 2023, 4:28 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯ ಸರ್ಕಾರದೊಂದಿಗೆ 'ರಾಜಕೀಯ ಸೈದ್ಧಾಂತಿಕ ಸಂಘರ್ಷ'ದಲ್ಲಿ ತೊಡಗಿದ್ದಾರೆ. ಹಾಗೆ ಮಾಡದಂತೆ ಅವರಿಗೆ ಸಲಹೆ ನೀಡಬೇಕು ಮತ್ತು ವಿವಿಧ ವಿಷಯಗಳಲ್ಲಿ ಕ್ಯಾಬಿನೆಟ್ ನಿರ್ದೇಶನಗಳನ್ನು ಪಾಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಬರೆದ ಪತ್ರವನ್ನು ಕಾನೂನು ಸಚಿವ ಎಸ್‌. ರಘುಪತಿ ಅವರ ನೇತೃತ್ವದ ನಿಯೋಗವು ನವದೆಹಲಿಯಲ್ಲಿ ರಾಷ್ಟ್ರಪತಿಗಳಿಗೆ ಗುರುವಾರ ಹಸ್ತಾಂತರಿಸಿತು. ಪತ್ರವನ್ನು ಮಾಧ್ಯಮ ಹೇಳಿಕೆ ಮೂಲಕ ಬಿಡುಗಡೆ ಮಾಡಲಾಗಿದೆ.

ಜನವರಿ 9 ರಂದು ವರ್ಷದ ಮೊದಲ ಅಧಿವೇಶನದ ಆರಂಭದ ದಿನದ ಸರ್ಕಾರ ಸಿದ್ಧಪಡಿಸಿ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಮತ್ತು ತಮ್ಮದೇ ಕೆಲವು ಮಾತುಗಳನ್ನು ಸೇರಿಸಿದ್ದಾರೆ. ಈ ಮೂಲಕ ಭಾಷಣವನ್ನು ತಿರುಚಿದ್ದಾರೆ. ಇದು ಸದನ ಸಂಪ್ರದಾಯಗಳಿಗೆ ವಿರುದ್ಧವಾದ ನಡೆ ಎಂದು ಸ್ಟಾಲಿನ್ ಅವರು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

‘ರಾಜ್ಯಪಾಲರ ಕಚೇರಿಯು ಉನ್ನತವಾದದ್ದು. ಅದಕ್ಕೆ ಎಲ್ಲಾ ಗೌರವವನ್ನೂ ನೀಡಲಾಗಿದೆ. ರಾಜ್ಯಪಾಲರ ಹುದ್ದೆಯಲ್ಲಿರುವ ವ್ಯಕ್ತಿಯು ರಾಜಕೀಯ ಮೀರಿದವರಾಗಿರಬೇಕು. ಆದರೆ ರಾಜ್ಯಪಾಲ ರವಿ ಅವರು ತಮಿಳುನಾಡು ಸರ್ಕಾರದೊಂದಿಗೆ ರಾಜಕೀಯವಾಗಿ ಸೈದ್ಧಾಂತಿಕ ಸಂಘರ್ಷಕ್ಕಿಳಿದಿದ್ದಾರೆ. ಅವರ ನಡೆ ನಮ್ಮ ಸಂವಿಧಾನಕ್ಕೆ ವಿರುದ್ಧವಾದದ್ದು’ ಎಂದು ಸ್ಟಾಲಿನ್‌ ಅವರು ತಮಿಳಿನಲ್ಲಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ರವಿ ಅವರು ತಮಿಳು ಜನರ ಸಂಸ್ಕೃತಿ, ಸಾಹಿತ್ಯ ಮತ್ತು ಸಮಾನತೆಯ ರಾಜಕಾರಣವನ್ನು ವಿರೋಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಅನುಸರಿಸುತ್ತಿರುವ ದ್ರಾವಿಡ ನೀತಿಗಳು, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತರ್ಕಬದ್ಧ ಚಿಂತನೆಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸುತ್ತಿದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ತಮಿಳು ಸಂಸ್ಕೃತಿ, ಸಾಹಿತ್ಯ ಮತ್ತು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಮಾತನಾಡಿದ್ದಾರೆ. ಜನವರಿ 9 ರ ಘಟನೆ ಇದರ ಮುಂದುವರಿದ ಭಾಗವಾಗಿದೆ’ ಎಂದು ಅವರು ಆರೋಪಿಸಿದ್ದಾರೆ. .

‘ರಾಜ್ಯಪಾಲರು ಮಂತ್ರಿ ಮಂಡಳದ ಶಿಫಾರಸುಗಳಿಗೆ ಬದ್ಧರಾಗಿರಬೇಕು ಎಂದು ಸಂವಿಧಾನದ 163 (1) ನೇ ವಿಧಿಯು ಹೇಳುತ್ತದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೇ ಇರಲು, ತಿರುಚಲು ಅವರಿಗೆ ಯಾವುದೇ ಹಕ್ಕಿಲ್ಲ. ಅವರು ಓದದೇ ಬಿಟ್ಟ ಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಪೆರಿಯಾರ್, ಅಣ್ಣಾದೊರೈ ಮತ್ತು ಕರುಣಾನಿಧಿ ಅವರ ಹೆಸರುಗಳಿದ್ದವು, ಸಾಮಾಜಿಕ ನ್ಯಾಯ, ಆತ್ಮಗೌರವ, ದ್ರಾವಿಡ ಮಾದರಿ ಆಡಳಿತದಂಥ ಮಹತ್ವದ ಉಲ್ಲೇಖಿಗಳಿದ್ದವು. ಇಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿ ಅಗೌರವ ತೋರಿರುವುದು ವಿಷಾದನೀಯ, ಹೀಗಾಗಿ, ಭಾಷಣ ತಿರುಚದಂತೆ ನಿರ್ಣಯ ತರಬೇಕಾಯಿತು’ ಎಂದು ಸ್ಟಾಲಿನ್‌ ಅವರು ರಾಷ್ಟ್ರಪತಿಗಳಿಗೆ ತಿಳಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯಲು ಮತ್ತು ಸಂವಿಧಾನದ ನೀತಿಗಳನ್ನು ರಕ್ಷಿಸಲು ರಾಷ್ಟ್ರಪತಿಗಳನ್ನು ಸ್ಟಾಲಿನ್ ಒತ್ತಾಯಿಸಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಬಾಕಿ ಉಳಿಸಿಕೊಂಡಿರುವ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ.

ತಮಿಳುನಾಡು ಎಲ್ಲರನ್ನು ಸ್ವಾಗತಿಸುವ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ರಾಜ್ಯ. ಆದರೆ ರವಿ ಇವುಗಳ ವಿರುದ್ಧ ಮಾತನಾಡಿದ್ದಾರೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಸಚಿವ ಸಂಪುಟದ ಶಿಫಾರಸ್ಸುಗಳ ಪ್ರಕಾರ ಕಾರ್ಯನಿರ್ವಹಿಸುವಂತೆ ರವಿ ಅವರಿಗೆ ನಿರ್ದೇಶನ ನೀಡಬೇಕು. ಈ ವಿಷಯದಲ್ಲಿ ನೀವು (ರಾಷ್ಟ್ರಪತಿ) ಮಧ್ಯಸ್ಥಿಕೆ ವಹಿಸಬೇಕು. ಸೈದ್ಧಾಂತಿಕ ಸಂಘರ್ಷಕ್ಕೆ ಇಳಿಯದಂತೆ ರವಿ ಅವರಿಗೆ ತಿಳಿಸಬೇಕು’ ಎಂದೂ ಸ್ಟಾಲಿನ್‌ ಅವರು ಮನವಿ ಮಾಡಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳ ನಡುವೆ ಸೌಹಾರ್ದಯುತ ಸಂಬಂಧವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅವುಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲೆಂದು ಪತ್ರ ಬರೆಯಲಾಗಿದೆ ಎಂದು ಸ್ಟಾಲಿನ್ ಅವರು ಮುರ್ಮು ಅವರಿಗೆ ತಿಳಿಸಿದ್ದಾರೆ.

ಈ ಪ್ರಯತ್ನದ ಫಲವಾಗಿ ಸಕಾರಾತ್ಮಕ ಫಲಿತಾಂಶವನ್ನು ತಾವು ನಿರೀಕ್ಷಿಸುತ್ತಿರುವುದಾಗಿಯೂ ಸ್ಟಾಲಿನ್‌ ಆಶಯ ವ್ಯಕ್ತಪಡಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT