ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಸ್ಸಾಹಸ ಮಟ್ಟಹಾಕಲು ದೇಶ ಸನ್ನದ್ಧ: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಎಚ್ಚರಿಕೆ

Last Updated 3 ಫೆಬ್ರುವರಿ 2021, 16:42 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಗಡಿಗಳಲ್ಲಿ ಬಿಕ್ಕಟ್ಟು ಬಗೆಹರಿಯದಿರುವ ಕಡೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಒಪ್ಪಂದವನ್ನು ಪದೇ ಪದೇ ಉಲ್ಲಂಘಿಸುವ ಬೆಳವಣಿಗೆಗಳು ಭಾರತಕ್ಕೆ ಗೊತ್ತಿಲ್ಲದ ವಿಚಾರಗಳೇನಲ್ಲ. ಭೌಗೋಳಿಕ ಸಮಗ್ರತೆ ಕಾಪಾಡಲು ಇಂತಹ ಯಾವುದೇ ದುಸ್ಸಾಹಸಗಳನ್ನು ಮಟ್ಟಹಾಕುವುದಕ್ಕೆ ದೇಶವು ಸನ್ನದ್ಧವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸ್ಪಷ್ಟಪಡಿಸಿದರು.

ಇಲ್ಲಿನ ಯಲಹಂಕದ ವಾಯುನೆಲೆಯಲ್ಲಿ ಹಮ್ಮಿಕೊಂಡಿರುವ ‘ಏರೊ ಇಂಡಿಯಾ 2021’ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಎಲ್ಲೂ ಚೀನಾದ ಹೆಸರು ಉಲ್ಲೇಖಿಸದೆಯೇ ಆ ದೇಶಕ್ಕೆ ಎಚ್ಚರಿಕೆ ನೀಡಿದರು. ‘ಯಾವುದೇ ಬೆಲೆ ತೆತ್ತಾದರೂ ನಮ್ಮ ನಾಗರಿಕರನ್ನು ರಕ್ಷಿಸಿಕೊಳ್ಳುತ್ತೇವೆ.ಗಡಿಗಳನ್ನು ಕಾಪಾಡಿಕೊಳ್ಳುತ್ತೇವೆ’ ಎಂಬ ಸಂದೇಶ ರವಾನಿಸಿದರು.

‘ನಮ್ಮ ಅನೇಕ ಮಿತ್ರರಾಷ್ಟ್ರಗಳಂತೆಯೇ ನಾವೂ ಹಲವಾರು ಕಡೆಗಳಿಂದ ಬೆದರಿಕೆಗಳನ್ನು ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಸರ್ಕಾರಿ ಪ್ರಾಯೋಜಿತ ಹಾಗೂ ಸರ್ಕಾರಗಳೇ ರೂಪಿಸುತ್ತಿರುವ ಭಯೋತ್ಪಾದನೆಯ ಬಲಿಪಶು ಆಗಿದ್ದೇವೆ. ಭಯೋತ್ಪಾದನೆ ಎಂಬುದು ಈಗ ಜಾಗತಿಕ ಬೆದರಿಕೆಯಾಗಿ ಮಾರ್ಪಟ್ಟಿದೆ’ ಎಂದರು.

‘2020 ಸವಾಲಿನಿಂದ ಕೂಡಿದ ವರ್ಷ. ಬರೀ ಸೋಲುಗಳು ಹಾಗೂ ನೋವುಗಳಿಂದಲೇ ತುಂಬಿದ್ದ ಈ ವರ್ಷದಲ್ಲಿ ಪಯಣ ಸ್ಥಬ್ದವಾಗಿತ್ತು. ಜೀವನೋಪಾಯ ಕಂಡುಕೊಳ್ಳುವಿಕೆ ಹಾಗೂ ಕೈಗಾರಿಕಾ ಬೆಳವಣಿಗೆ ದೃಷ್ಟಿಗಳಿಂದಲೂ ಜಗತ್ತು ಸಾಕಷ್ಟು ಹೊಡೆತ ಅನುಭವಿಸಿದೆ’ ಎಂದರು.

‘ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮವನ್ನು ಧೈರ್ಯದಿಂದ ಮುಂದುವರಿಸಿದ್ದೇವೆ. ವರ್ಚುವಲ್‌ ಮಾದರಿಯನ್ನೂ ಅಳವಡಿಸಿಕೊಂಡು ಹೈಬ್ರಿಡ್‌ ರೂಪದಲ್ಲಿ ನಡೆಯುತ್ತಿರುವಜಗತ್ತಿನ ಮೊದಲವೈಮಾನಿಕ ಪ್ರದರ್ಶನಕ್ಕೆ ವ್ಯಕ್ತವಾಗಿರುವ ಬೆಂಬಲವು ಭಾರತದ ಆತ್ಮವಿಶ್ವಾಸವನ್ನು ವೃದ್ಧಿಸಿದೆ’ ಎಂದು ತಿಳಿಸಿದರು.

‘ಇರಾನ್‌, ಮಡಗಾಸ್ಕರ್‌, ಮಾಲ್ಡೀವ್ಸ್‌ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ಸಚಿವರು ಈ ಪ್ರದರ್ಶನದಲ್ಲಿ ಖುದ್ದಾಗಿ, ಅನೇಕರು ವರ್ಚುವಲ್‌ ರೂಪದಲ್ಲಿ ಭಾಗವಹಿಸಿದ್ದಾರೆ. 80 ವಿದೇಶಿ ಕಂಪನಿಗಳ ಮಳಿಗೆಗಳೂ ಸೇರಿ 540 ಪ್ರದರ್ಶನ ಮಳಿಗೆಗಳಿಗೆ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಾಗತಿಕ ಸಮುದಾಯದಲ್ಲಿ ಆಶಾವಾದ ವೃದ್ಧಿಸುತ್ತಿರುವುದರ ಸಂಕೇತ ಇದು’ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಾಯಿ, ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ರಾಕೇಶ್ ಕುಮಾರ್ ಸಿಂಗ್ ಭದೌರಿಯ, ನೌಕಾಪಡೆಯ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ರಕ್ಷಣಾ ಉತ್ಪಾದನಾ ಇಲಾಖೆಯ ಕಾರ್ಯದರ್ಶಿ ರಾಜ್ ಕುಮಾರ್,ವಾಯುಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ವೈಮಾನಿಕ ಪ್ರದರ್ಶನ ವೀಕ್ಷಿಸಿದರು.

‘ರಕ್ಷಣಾ ವಲಯದ ಸುಧಾರಣೆಗೆ₹ 9.48 ಲಕ್ಷ ಕೋಟಿ ಹೂಡಿಕೆ’

‘ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ರಕ್ಷಣಾ ಪರಿಕರಗಳ ಉತ್ಪಾದನೆಯನ್ನು ಇನ್ನಷ್ಟು ದೊಡ್ಡಮಟ್ಟದಲ್ಲಿ ಕೈಗೊಳ್ಳುವುದು ಹಾಗೂ ಮತ್ತಷ್ಟು ಸಂಕೀರ್ಣ ವೇದಿಕೆಗಳನ್ನು ತಲುಪುವುದು ನಮ್ಮ ಉದ್ದೇಶ. ಇದಕ್ಕಾಗಿ ಮುಂಬರುವ ಏಳೆಂಟು ವರ್ಷಗಳಲ್ಲಿ ದೇಶದ ರಕ್ಷಣಾ ವಲಯದ ಸುಧಾರಣೆಗೆ 130 ಬಿಲಿಯನ್‌ ಅಮೆರಿಕದ ಡಾಲರ್‌ (₹ 9.48 ಲಕ್ಷ ಕೋಟಿ) ವೆಚ್ಚ ಮಾಡುವ ಚಿಂತನೆಯನ್ನು ಭಾರತ ಹೊಂದಿದೆ’ ಎಂದು ರಾಜನಾಥ ಸಿಂಗ್‌ ತಿಳಿಸಿದರು.

‘2014ರಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದಲೂ ನಮ್ಮ ಸರ್ಕಾರ ರಕ್ಷಣಾ ವಲಯದಲ್ಲಿ ರಫ್ತಿಗೆ ಹಾಗೂ ವಿದೇಶಿ ನೇರ ಹೂಡಿಕೆಗೆಉತ್ತೇಜನ ನೀಡುವ ಪರಿಸರ ನಿರ್ಮಿಸಲು ಶ್ರಮಿಸುತ್ತಿದೆ.ರಫ್ತು ಹೆಚ್ಚಳ ಮತ್ತು ಸ್ವಾವಲಂಬನೆ ಸಾಧಿಸುವುದರ ಮೂಲಕ ರಕ್ಷಣಾ ಉತ್ಪಾದನಾವಲಯವು 2024ರ ಒಳಗೆ ₹ 1.75 ಲಕ್ಷ ಕೋಟಿ ವಹಿವಾಟು ನಡೆಸಬೇಕು ಹಾಗೂ ವೈಮಾನಿಕ ಮತ್ತು ರಕ್ಷಣಾ ವಲಯದ ಸರಕು ಮತ್ತು ಸೇವೆಗಳಲ್ಲಿ ₹ 35 ಸಾವಿರ ಕೋಟಿ ರಫ್ತು ಮಾಡಬೇಕು ಎಂಬಗುರಿಗಳನ್ನು ನಿಗದಿಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT