ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್ ಡೊಭಾಲ್ ನೇತೃತ್ವದಲ್ಲಿ ಸಭೆ: ಅಫ್ಗನ್‌ ಸ್ಥಿತಿ ಸುಧಾರಣೆಗೆ ಯತ್ನ

ಅಜಿತ್ ಡೊಭಾಲ್ ನೇತೃತ್ವದಲ್ಲಿ 8 ದೇಶಗಳ ಭದ್ರತಾ ಸಲಹೆಗಾರರ ಸಭೆ
Last Updated 10 ನವೆಂಬರ್ 2021, 20:04 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನವು ಜಾಗತಿಕ ಭಯೋತ್ಪಾದಕರ ಸುರಕ್ಷಿತ ನೆಲೆಯಾಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಕೆಲಸ ಮಾಡಲು ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯ ಏಷ್ಯಾದ ಐದು ದೇಶಗಳು ಬುಧವಾರ ಇಲ್ಲಿ ಪ್ರತಿಜ್ಞೆ ಮಾಡಿದವು. ಅಫ್ಗನ್‌ನಲ್ಲಿ ಮುಕ್ತ ಹಾಗೂ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಗೆ ಕರೆ ನೀಡಿದವು. ಮಧ್ಯ ಏಷ್ಯಾದ ಕಜಕಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ತುರ್ಕ್‌ಮೆನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳು ಭಾಗವಹಿಸಿದ್ದವು.

ಅಫ್ಗಾನಿಸ್ತಾನವು ಭಯೋತ್ಪಾದಕರ ತರಬೇತಿಗೆ, ಸಂಚು ರೂಪಿಸುವುದಕ್ಕೆ, ಹಣಕಾಸು ನೆರವು ನೀಡುವುದಕ್ಕೆ ಬಳಕೆಯಾಗಬಾರದು ಎಂಬ ನಿರ್ಣಯವನ್ನು ಎಂಟು ದೇಶಗಳ ಉನ್ನತ ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ಅಫ್ಗಾನಿಸ್ತಾನದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸದಿರುವ, ದೇಶದ ಏಕತೆ ಹಾಗೂ ಸಾರ್ವಭೌಮತೆಯನ್ನು ಗೌರವಿಸುವ ನಿರ್ಣಯವು ಇದರಲ್ಲಿ ಮುಖ್ಯವಾಗಿದ್ದು, ಪಾಕಿಸ್ತಾನಕ್ಕೆ ಪರೋಕ್ಷ ಸಂದೇಶ ರವಾನಿಸಲಾಗಿದೆ.ಶಾಂತಿಯುತ, ಸುರಕ್ಷಿತ ಮತ್ತು ಸುಸ್ಥಿರ ಅಫ್ಗಾನಿಸ್ತಾನಕ್ಕೆ ಬೆಂಬಲ ನೀಡುವುದನ್ನು ನಿರ್ಣಯ ಒತ್ತಿ ಹೇಳಿದೆ.

ಅಫ್ಗಾನಿಸ್ತಾನದಲ್ಲಿ ಕುಸಿಯುತ್ತಿರುವ ಸಾಮಾಜಿಕ– ಆರ್ಥಿಕ ಸ್ಥಿತಿ ಬಗ್ಗೆ ಭದ್ರತಾ ಸಭೆ ಕಳವಳ ವ್ಯಕ್ತಪಡಿಸಿತು. ಅಫ್ಗನ್ ಜನರಿಗೆ ತುರ್ತಾಗಿ ಮಾನವೀಯ ನೆಲೆಯಲ್ಲಿ ನೆರವು ನೀಡಬೇಕಿದೆ ಎಂಬುದನ್ನು ಸಭೆ ಒತ್ತಿ ಹೇಳಿತು. ಅಫ್ಗಾನಿಸ್ತಾನಕ್ಕೆ ಮಾನವೀಯ ನೆರವನ್ನು ಅಡೆತಡೆಯಿಲ್ಲದೆ, ನೇರ ಮತ್ತು ಭರವಸೆಯ ರೀತಿಯಲ್ಲಿ ಒದಗಿಸಬೇಕು ಮತ್ತು ಎಲ್ಲ ವರ್ಗಗಳಿಗೂ ತಾರತಮ್ಯವಿಲ್ಲದೆ ಸಹಾಯ ನೀಡಬೇಕು ಎಂದು ಭದ್ರತಾ ಅಧಿಕಾರಿಗಳು ಹೇಳಿದರು. ಅಫ್ಗಾನಿಸ್ತಾನದಲ್ಲಿ ಕೋವಿಡ್
ಪ್ರಸರಣ ತಡೆಗಟ್ಟಲು ನೆರವಾಗುವುದರ ಜೊತೆಗೆ ಭವಿಷ್ಯದಲ್ಲಿ ಸದಸ್ಯ ದೇಶಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂಬುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.

ಅಫ್ಗಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಅಫ್ಗನ್ ಮಾತ್ರವಲ್ಲದೇ ಏಷ್ಯಾ ವಲಯದನ್ನು ಪ್ರಭಾವಿಸಿವೆ ಎಂದು ಸಭೆಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅಭಿಪ್ರಾಯಪಟ್ಟರು. ಸಭೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅಧಿಕಾರಿಗಳು ಸಭೆಯ ನಿರ್ಣಯದ ಬಗ್ಗೆ ಮಾಹಿತಿ ನೀಡಿದರು.

ಏನೇನು ಚರ್ಚೆ

lಅಫ್ಗನ್‌ ಭದ್ರತಾ ಸ್ಥಿತಿ ಮತ್ತು ಅದರ ಪ್ರಾದೇಶಿಕ–ಜಾಗತಿಕ ಪರಿಣಾಮಗಳು

lದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ

lಭಯೋತ್ಪಾದನೆ, ತೀವ್ರವಾದದ ಬೆದರಿಕೆ

lಮಾದವಸ್ತು ಕಳ್ಳ ಸಾಗಣೆ

lಅಫ್ಗನ್‌ಗೆ ನೀಡಬೇಕಿರುವ ನೆರವು

ಜನರ ಕಷ್ಟಗಳ ಬಗ್ಗೆ ಕಳವಳ

ಅಫ್ಗಾನಿಸ್ತಾನದ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಸಭೆ ಕಳವಳ ವ್ಯಕ್ತಪಡಿಸಿತು. ಮಹಿಳೆ, ಮಕ್ಕಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಭೆ ಹೇಳಿದೆ.

ಕಂದಹಾರ್, ಕಾಬೂಲ್ ಮೊದಲಾದೆಡೆ ನಡೆದ ಭಯೋತ್ಪಾದಕ ದಾಳಿಗಳನ್ನು ಖಂಡಿಸಲಾಯಿತು. ಮಾದಕದ್ರವ್ಯ ಸಾಗಣೆ, ತೀವ್ರವಾದ ಮತ್ತು ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದು ಸಭೆ ಅಭಿಪ್ರಾಯಪಟ್ಟಿತು.

ಅಫ್ಗನ್ ವಿಚಾರದಲ್ಲಿ ವಿಶ್ವಸಂಸ್ಥೆ ಕೈಗೊಂಡ ನಿರ್ಣಯವನ್ನು ಸಭೆ ಪ್ರಸ್ತಾಪಿಸಿತು. ಅಫ್ಗಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಅಲ್ಲಿ ಅದರ ನಿರಂತರ ಉಪಸ್ಥಿತಿ ಅಗತ್ಯವಿದೆ ಎಂದು ವಿವಿಧ ದೇಶಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT