ಸೋಮವಾರ, ಸೆಪ್ಟೆಂಬರ್ 28, 2020
25 °C

ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣಂ: ಅಮರಾವತಿ ನಗರದ ಬದಲು ವಿಶಾಖಪಟ್ಟಣಂಗೆ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್‌ ವಿಸ್ತರಿಸಿದೆ. ಈ ನಿರ್ದೇಶನದ ಬೆನ್ನಲ್ಲೇ ಅಮರಾವತಿಯಲ್ಲಿ 14 ತಿಂಗಳಿನಿಂದ ಸ್ಥಗಿತಗೊಂಡಿದ್ದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿದ್ದು, ಅಮರಾವತಿಯನ್ನು ಮಹಾನಗರವಾಗಿ ಅಭಿವೃದ್ಧಿ ಪಡಿಸಲು ಸಜ್ಜಾಗಿದೆ.

ಅಮರಾವತಿಯಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು, ಜಗನ್‌ ಅವರು 2019ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸ್ಥಗಿತಗೊಂಡಿದ್ದವು.

ನಗರಕ್ಕೆ ಸಂಪರ್ಕ ಕಲ್ಪಿಸುವ ಎಂಟು ಪಥಗಳ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಆಂತರಿಕ ರಸ್ತೆಗಳು, ಕಟ್ಟಡಗಳು, ವಿಧಾನಸಭೆ ಮತ್ತು ನ್ಯಾಯಾಲಯ ಸಂಕೀರ್ಣ, ಸಚಿವರ ನಿವಾಸಗಳು, ಅಧಿಕಾರಿಗಳ ಅಧಿಕೃತ ನಿವಾಸಗಳ ನಿರ್ಮಾಣ ಕಾಮಗಾರಿಗಳೂ ಅರ್ಧಕ್ಕೆ ನಿಂತಿದ್ದವು.

ಜಗನ್‌ ಅವರು ನ್ಯಾಯಾಲಯದ ಮುಂದೆ, ಮೂರು ನಗರಗಳನ್ನು ರಾಜ್ಯದ ರಾಜಧಾನಿಗಳನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಇರಿಸಿದ್ದರು. ಅಮರಾವತಿಯನ್ನು ಕೇವಲ ಶಾಸಕಾಂಗದ ರಾಜಧಾನಿಯನ್ನಾಗಿ ಉಳಿಸಿಕೊಂಡು, ವಿಶಾಖಪಟ್ಟಣಂ ಅನ್ನು ಕಾರ್ಯಕಾರಿ ರಾಜಧಾನಿ ಮತ್ತು ಕರ್ನೂಲ್‌ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿಸುವ ಯೋಜನೆ ಅವರದ್ದಾಗಿದೆ.

ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಸುಮಾರು 34 ಸಾವಿರ ಎಕರೆ ಜಮೀನು ನೀಡಿದ್ದ ರೈತರು ಜಗನ್‌ ಸರ್ಕಾರದ ಯೋಜನೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಿಂದಿನ ಸರ್ಕಾರವು ಅಮರಾವತಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ. ಆಡಳಿತಾತ್ಮಕ ರಾಜಧಾನಿಯನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸಿದರೆ ಈ ಎಲ್ಲ ವೆಚ್ಚಗಳು ವ್ಯರ್ಥವಾಗುತ್ತವೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದರು.

ರೈತರ ಅಹವಾಲನ್ನು ಪರಿಗಣಿಸಿದ್ದ ಹೈಕೋರ್ಟ್‌, ಈಗಾಗಲೇ ನಿರ್ಮಿಸಿರುವ ಕಟ್ಟಡಗಳು, ಕಲ್ಪಿಸಿರುವ ಮೂಲ ಸೌಕರ್ಯವನ್ನು ಸರ್ಕಾರ ಏನು ಮಾಡುತ್ತದೆ? ಎಂದು ಜಗನ್‌ ಸರ್ಕಾರವನ್ನು ಪ್ರಶ್ನಿಸಿತ್ತು. ಮಾತ್ರವಲ್ಲದೆ, ರಾಜಧಾನಿ ವಿಚಾರದಲ್ಲಿ ಆಗಸ್ಟ್‌ 27ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶ ನೀಡಿತ್ತು.


ನಗರ ಯೋಜನೆಯ ಚಿತ್ರ

ಈ ಆದೇಶದ ಬಳಿಕ ಜಗನ್‌ ಅವರು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಎಪಿಸಿಆರ್‌ಡಿಎ) ಬದಲಾಗಿ ರಚಿಸಲಾಗಿರುವ ಅಮರಾವತಿ ಮೆಟ್ರೋಪಾಲಿಟನ್‌ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಎಎಂಆರ್‌ಡಿಎ) ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಬುಧವಾರ ನಡೆಸಿದ್ದರು. ಸಭೆ ವೇಳೆ, ಅಮರಾವತಿ ಅಭಿವೃದ್ಧಿ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು, ಆರ್ಥಿಕ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು ಹಾಗೂ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು 'ಹಿಂದೂಸ್ತಾನ ಟೈಮ್ಸ್'‌ ವರದಿ ಮಾಡಿದೆ.

‘ಎಲ್ಲ ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸಬೇಕು. ಶಾಸಕಾಂಗದ ರಾಜಧಾನಿ ಅಮರಾವತಿಯ ಅಭಿವೃದ್ಧಿ ಯೋಜನೆಗಳನ್ನು ಸಿದ್ಧ ಪಡಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೊತ್ಸಾ ಸತ್ಯನಾರಾಯಣ ಹೇಳಿದ್ದಾರೆ.

ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಸುಮಾರು ₹ 14,000 ದಿಂದ ₹ 15,000 ಕೋಟಿ ಹಣ ಬೇಕಾಗುತ್ತದೆ ಎಂದು ಎಎಂಆರ್‌ಡಿಎ ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಹಣಕಾಸು ಇಲಾಖೆಯ ಸಮನ್ವಯದೊಂದಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮಾರ್ಗಗಳನ್ನು ಕಂಡುಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಅಮರಾವತಿ ನಿರ್ಮಾಣಕ್ಕೆ ಜಮೀನು ನೀಡಿರುವ ರೈತರು, ನಗರದ ಅಭಿವೃದ್ಧಿ ಬಳಿಕ ತಮ್ಮ ನಿವೇಶನಕ್ಕೆ ತಕ್ಕ ಬೆಲೆ ಪಡೆಯಲಿದ್ದಾರೆ. ಸರ್ಕಾರದ ಮೂರು ರಾಜಧಾನಿ ಯೋಜನೆಯ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ‘ಅಮರಾವತಿಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ರೈತರಿಗೆ ಅನ್ಯಾಯವಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿರುವ ಅಧಿಕಾರಿಯೊಬ್ಬರು, ಮೂಲಸೌಕರ್ಯದೊಂದಿಗೆ ಭೂಮಿಯನ್ನು ಅಭಿವೃದ್ದಿ ಪಡಿಸಿ, ಕಟ್ಟಡಗಳನ್ನು ನಿರ್ಮಾಣ ಮಾಡಿದ ನಂತರ ಬಾಕಿ ಕಾರ್ಯಗಳಿಗೆ ಹಣ ಹೊಂದಿಸಲು ಭೂಮಿಯನ್ನು ಮಾರಾಟ ಮಾಡಲು ಸರ್ಕಾರ ಚಿಂತಿಸುತ್ತಿದೆ ಎಂದು ತಿಳಿಸಿದ್ದಾರೆ.


ನಗರ ಯೋಜನೆಯ ಚಿತ್ರ

ಏತನ್ಮಧ್ಯೆ, ಅಮರಾವತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 41,675 ಕೋಟಿ ಮೌಲ್ಯದ ಯೋಜನೆಗಳನ್ನು ರೂಪಿಸಲಾಗಿದೆ. ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯ ಶೇ. 45 ರಿಂದ 80 ರಷ್ಟು ಈಗಾಗಲೇ ಪೂರ್ಣಗೊಂಡಿವೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.

1200 ಉನ್ನತ ದರ್ಜೆಯ ಮನೆಗಳನ್ನು ನಿರ್ಮಿಸುವ ರಿಯಲ್ ಎಸ್ಟೇಟ್ ಯೋಜನೆ ಹ್ಯಾಪಿ ನೆಸ್ಟ್‌ ಇನ್ನೇನು ಪೂರ್ಣಗೊಳ್ಳಲಿದೆ. ಇದು ದೊಡ್ಡ ಮಟ್ಟದ ಆದಾಯ ತಂದುಕೊಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಅಮರಾವತಿಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಭೂ ಬ್ಯಾಂಕ್‌ ಸುಮಾರು 90 ಸಾವಿರದಿಂದ 1 ಲಕ್ಷ ಕೋಟಿ ರೂಪಾಯಿಯಷ್ಟು ಬೆಲೆಬಾಳುತ್ತದೆ. ನಿರೀಕ್ಷೆಯಂತೆ ಕಾಮಗಾರಿಗಳು ಪೂರ್ಣಗೊಂಡು, ಅಮರಾವತಿ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾದರೆ ಇದು ಬಳಿ 2ರಿಂದ 3 ಲಕ್ಷ ಕೋಟಿ ಮೌಲ್ಯಕ್ಕೆ ಹೆಚ್ಚಬಹುದು' ಎಂದು ಅವರು ವಿಶ್ಲೇಷಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು