ಮಂಗಳವಾರ, ಸೆಪ್ಟೆಂಬರ್ 28, 2021
21 °C

ಪ್ರಧಾನಿ ಜತೆಗಿನ ಮಾತುಕತೆ ನಂತರ ಕೋವಿಡ್‌ ಲಸಿಕೆ ಪಡೆದ ಗ್ರಾಮಸ್ಥರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಹಿಂಜರಿಕೆ ಬದಿಗೊತ್ತಿ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು,’ ಎಂಬ ನರೇಂದ್ರ ಮೋದಿ ಅವರ ಮಾತಿನಿಂದ ಪ್ರೇರಣೆ ಪಡೆದ ಮಧ್ಯಪ್ರದೇಶದ ದುಲಾರಿಯಾ ಎಂಬ ಹಳ್ಳಿಯ ವ್ಯಕ್ತಿ ಮತ್ತು ಆತನ ಕುಟುಂಬಸ್ಥರು ಭಾನುವಾರ ಲಸಿಕೆ ಪಡೆದಿದ್ದಾರೆ.

ಜನರನ್ನು ಹಿಂಜರಿಕೆಯಿಂದ ಹೊರತಂದು ಲಸಿಕೆ ಪಡೆಯುವಂತೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ದುಲಾರಿಯಾ ಗ್ರಾಮದ ಹಳ್ಳಿ ಜನರೊಂದಿಗೆ ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಪ್ರಧಾನ ಮಂತ್ರಿಯ ಮಾಸಿಕ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಲಾಯಿತು.

ಲಸಿಕೆ ಅಭಿಯಾನದ ಬಗ್ಗೆ ಮಧ್ಯಪ್ರದೇಶದ ದುಲಾರಿಯಾ ಗ್ರಾಮಸ್ಥರಿಗೆ ಇರುವ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ ಮೋದಿ ಅವರು, ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ.

‘ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ ನಂತರ, ನಾನು ಮತ್ತು ನನ್ನ ಕುಟುಂಬ ಸದಸ್ಯರು ಶನಿವಾರ ಕೋವಿಡ್‌ ಲಸಿಕೆ ಪಡೆದಿದ್ದೇವೆ’ ಎಂದು ರಾಜೇಶ್‌ ಹಿರವೆ ಎಂಬುವವರು ಹೇಳಿದ್ದಾರೆ. ಪ್ರಧಾನಿ ಅವರೊಂದಿಗೆ ಮಾತಾಡಿದ ಗ್ರಾಮಸ್ಥರ ಪೈಕಿ ರಾಜೇಶ್ ಹಿರವೆ (43) ಎಂಬುವವರೂ ಒಬ್ಬರು.

‘ಲಸಿಕೆ ಪಡೆಯುವಂತೆ ನಾನು ಇತರ ಗ್ರಾಮಸ್ಥರನ್ನೂ ಪ್ರೋತ್ಸಾಹಿಸಿದೆ. ಗ್ರಾಮದ 127 ಜನರಿಗೆ ಲಸಿಕೆ ಕೊಡಿಸಲಾಗಿದೆ,’ ಎಂದು ಅವರು ಹೇಳಿದರು.

ಅದೇ ಗ್ರಾಮದ 60 ವರ್ಷದ ಕಿಶೋರಿಲಾಲ್ ಧುರ್ವೆ ಅವರೊಂದಿಗೂ ನರೇಂದ್ರ ಮೋದಿ ಮಾತನಾಡಿದ್ದಾರೆ. ಮೋದಿ ಅವರೊಂದಿಗೆ ಮಾತನಾಡಿದ ನಂತರ ಅವರೂ ಲಸಿಕೆ ಪಡೆದುಕೊಂಡಿದ್ದಾರೆ.

‘ಲಸಿಕೆಯ ಕುರಿತು ವಾಟ್ಸ್‌ಆ್ಯಪ್‌ನಲ್ಲಿ ತಪ್ಪು ಸಂದೇಶಗಳು ಹರಿದಾಡುತ್ತಿದ್ದು, ಇದನ್ನೇ ನಂಬಿರುವ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ,’ ಎಂದು ಹಿರಾವೆ ಪ್ರಧಾನಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನರೇಂದ್ರ ಮೋದಿ ಅವರು, ‘ನಾನು ಮತ್ತು ನನ್ನ 100 ವರ್ಷಗಳ ತಾಯಿಯೂ ಎರಡು ಡೋಸ್‌ ಲಸಿಕೆ ಪಡೆದಿದ್ದೇವೆ. ವದಂತಿಗಳನ್ನು ನಂಬಬೇಡಿ. ವಿಜ್ಞಾನ ಮತ್ತು ವಿಜ್ಞಾನಿಗಳನ್ನು ನಂಬಿ,‘ ಎಂದು ಜನರನ್ನು ಕೇಳಿಕೊಂಡಿದ್ದರು.

‘ಕೋವಿಡ್‌ ಆಂತಕ ದೂರವಾಗಿಲ್ಲ. ನಾವು ಲಸಿಕೆ ಕಡೆಗೆ ಗಮನಹರಿಸಬೇಕು. ಮತ್ತು, ಕೋವಿಡ್‌ನ ನಿಯಮಾವಳಿಗಳನ್ನು ಪಾಲಿಸಬೇಕು,’ ಎಂದು ಮೋದಿ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು