ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂದೋಲನ ಜೀವಿ’ಗಳ ಹೊಸ ತಳಿ: ಪ್ರತಿಭಟನಾಕಾರರ ವಿರುದ್ದ ಮೋದಿ ವಾಗ್ದಾಳಿ

ಮಾತುಕತೆಗೆ ಸರ್ಕಾರ ಸಿದ್ಧವಿದೆ, ಪ್ರತಿಭಟನೆ ಕೈಬಿಡಲು ಮನವಿ
Last Updated 8 ಫೆಬ್ರುವರಿ 2021, 15:44 IST
ಅಕ್ಷರ ಗಾತ್ರ

ನವದೆಹಲಿ: ರೈತ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು, ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಕೆಲವರನ್ನು ‘ಆಂದೋಲನ ಜೀವಿ’ಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಣ್ಣಿಸಿದ್ದಾರೆ.

ದೇಶದಲ್ಲಿ ‘ಆಂದೋಲನ ಜೀವಿ’ಗಳ ಹೊಸ ತಳಿಯೊಂದು ಸೃಷ್ಟಿಯಾಗುತ್ತಿದೆ. ವೃತ್ತಿಪರ ಪ್ರತಿಭಟನಾಕಾರರಾಗಿರುವ ಇಂಥವರನ್ನು ಎಲ್ಲಾ ರೀತಿಯ ಪ್ರತಿಭಟನೆಗಳಲ್ಲೂ ಕಾಣಬಹುದಾಗಿದೆ. ಕೆಲವೊಮ್ಮೆ ಇವರು ಪರದೆಯ ಹಿಂದೆ ಇದ್ದುಕೊಂಡು ಹೋರಾಟಕ್ಕೆ ಸೈದ್ಧಾಂತಿಕ ತಿರುವು ನೀಡುತ್ತಾರೆ. ಇಂಥ ಪರಾವಲಂಬಿ ಜೀವಿಗಳಿಗೆ ಪ್ರತಿಭಟನೆ ಎಂದರೆ ಹಬ್ಬವಿದ್ದಂತೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ
ಟೀಕಿಸಿದರು.

ಎಫ್‌ಡಿಐ ವ್ಯಾಖ್ಯಾನ

‘ಎಫ್‌ಡಿಐ ಎಂದರೆವಿದೇಶಿ ನೇರ ಹೂಡಿಕೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ದೇಶದಲ್ಲಿ ಅದಕ್ಕೆ ‘ವಿದೇಶಿ ವಿನಾಶಕಾರಿ ವಿಚಾರಧಾರೆ’ (ಫಾರಿನ್‌ ಡಿಸ್ಟ್ರಕ್ಟಿವ್‌ ಐಡಿಯಾಲಜಿ) ಎಂಬ ಇನ್ನೊಂದು ಅರ್ಥ ಹುಟ್ಟಿಕೊಂಡಿದೆ. ಇಂಥ ವಿಚಾರಧಾರೆಗಳಿಂದ ದೇಶವನ್ನು ರಕ್ಷಿಸಲು ನಾವು ಹೆಚ್ಚು ಎಚ್ಚರದಿಂದಿರಬೇಕು ಎಂದರು.

‘ಪ್ರತಿಭಟನೆ ನಿಮ್ಮ ಹಕ್ಕು. ಆದರೆ ಅಲ್ಲಿ ಕುಳಿತಿರುವ ಹಿರಿಯ ವ್ಯಕ್ತಿಗಳನ್ನು ಮನೆಗೆ ಕಳುಹಿಸಿ ಎಂದು ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ದಯವಿಟ್ಟು ಪ್ರತಿಭಟನೆಯನ್ನು ಕೊನೆಗೊಳಿಸಿ. ಈ ಸದನದ ಮೂಲಕ ನಾನು ನಿಮ್ಮನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ’ ಎಂದು ಮೋದಿ ರೈತರಿಗೆ ಮನವಿ ಮಾಡಿದರು.

ಸುಮಾರು 75 ನಿಮಿಷಗಳ ಭಾಷಣದಲ್ಲಿ 30 ನಿಮಿಷಗಳಷ್ಟು ಕಾಲ ಹೊಸ ಕೃಷಿ ಕಾಯ್ದೆಗಳು ಮತ್ತು ರೈತರ ಪ್ರತಿಭಟನೆಯ ವಿಚಾರವಾಗಿಯೇ ಅವರು ಮಾತನಾಡಿದರು.

lಹೊಸ ಕಾಯ್ದೆಗಳಿಂದ ಮಂಡಿ ವ್ಯವಸ್ಥೆಯಾಗಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ವ್ಯವಸ್ಥೆಯಾಗಲಿ ರದ್ದಾಗುವುದಿಲ್ಲ. ಮಂಡಿಗಳನ್ನು ನವೀಕರಣಗೊಳಿಸಲಾಗುವುದು. ಎಂಎಸ್‌ಪಿ ಹಿಂದೆ ಇತ್ತು, ಈಗ ಇದೆ, ಮುಂದೆಯೂ ಇರುತ್ತದೆ

lವಿರೋಧಪಕ್ಷಗಳು, ರೈತರು ಮತ್ತು ಪ್ರತಿಭಟನಾಕಾರರು ಈ ರೈತಪರ ಕಾಯ್ದೆಗಳಿಗೆ ಒಂದು ಅವಕಾಶ ನೀಡಬೇಕು. ಕೊರತೆಗಳನ್ನು ಸರಿಪಡಿಸಲು ನಾವು ಸಿದ್ಧರಿದ್ದೇವೆ.

lದೇಶದ ಮೂರನೇ ಎರಡರಷ್ಟು ರೈತರು ಸಣ್ಣ ರೈತರಾಗಿದ್ದಾರೆ. ಅವರು ಉತ್ಪಾದಿಸಿದ ಬೆಳೆಯನ್ನು ಹೆಚ್ಚು ಬೆಲೆ ಸಿಗುವ ಕಡೆಗೆ ಮಾರಾಟ ಮಾಡಲು ಅವರಿಗೆ ಅವಕಾಶ ನೀಡಬೇಕು

lಪ್ರತಿಭಟನಾನಿರತ ರೈತರನ್ನು ಭಯೋತ್ಪಾದಕರು, ಖಾಲಿಸ್ತಾನಿಗಳು ಎಂದೆಲ್ಲ ಕರೆಯುವುದು ಸರಿಯಲ್ಲ. ದೇಶಕ್ಕೆ ಸಿಖ್ಖ್ ಸಮುದಾಯದವರ ಕೊಡುಗೆ ಅಪಾರವಾದುದು. ಅವರ ಬಗ್ಗೆ ದೇಶ
ಹೆಮ್ಮೆಪಡುತ್ತದೆ

lರೈತರ ಸಮಸ್ಯೆಗಳನ್ನು ಸಮೂಲವಾಗಿ ನಾಶಪಡಿಸಲು ಈ ಕಾನೂನುಗಳು ಸಹಕಾರಿಯಾಗಿವೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸೇರಿದಂತೆ ವಿರೋಧ ಪಕ್ಷಗಳವರು ಇಂಥ ಬದಲಾವಣೆಗಳ ಬಗ್ಗೆ ಉಲ್ಲೇಖ ಮಾಡಿದ್ದರು

lದೇಶದ 80 ಕೋಟಿ ಜನರಿಗೆ, ಕಡಿಮೆ ವೆಚ್ಚದಲ್ಲಿ ಪಡಿತರ ನೀಡುವ ವ್ಯವಸ್ಥೆ ರದ್ದಾಗುವುದಿಲ್ಲ. ಇದರ ಜತೆಯಲ್ಲೇ ರೈತರ ಆದಾಯವನ್ನು ಹೆಚ್ಚಿಸುವ ಕೆಲಸವನ್ನೂ ಮಾಡಬೇಕಾಗಿದೆ. ಆದ್ದರಿಂದ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಪ್ರಯತ್ನವನ್ನು ಯಾರೂ ಮಾಡಬಾರದು

‘ಆಂದೋಲನ ಜೀವಿ’ ಎನಿಸಲು ಹೆಮ್ಮೆ ಇದೆ

ಪ್ರತಿಭಟನಾಕಾರರನ್ನು ‘ಆಂದೋಲನ ಜೀವಿ’ಗಳು ಎಂದು ಕರೆಯುವ ಮೂಲಕ ಮೋದಿ ಅವರು ರೈತರನ್ನು ಅಪಮಾನಿಸಿದ್ದಾರೆ ಎಂದು ಹೇಳಿರುವ ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡರು, ಆಂದೋಲನವೇ ಭಾರತವನ್ನು ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸಿತ್ತು. ‘ಆಂದೋಲನ ಜೀವಿ’ಗಳು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದಿದ್ದಾರೆ.

ಪ್ರಧಾನಿಯ ಜತೆಗೆ ಬಿಜೆಪಿ ಹಾಗೂ ಅದರ ನಾಯಕರನ್ನೂ ಟೀಕೆಗೆ ಗುರಿಯಾಗಿಸಿದ ಹೋರಾಟಗಾರರು, ‘ಅವರು ಯಾವತ್ತೂ ಆಂದೋಲನಗಳ ವಿರೋಧಿಗಳಾಗಿದ್ದರು. ಬ್ರಿಟಿಷರ ವಿರುದ್ಧದ ಯಾವ ಆಂದೋಲನದಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಈಗಲೂ ಅವರು ಜನರ ಆಂದೋಲನಕ್ಕೆ ಹೆದರುತ್ತಾರೆ’ ಎಂದರು.

ರೈತರು ಮತ್ತೆ ತಮ್ಮ ಕಾಯಕಕ್ಕೆ ಹೋಗಲು ಸಿದ್ಧರಿದ್ದಾರೆ. ಸರ್ಕಾರದ ಹಟಮಾರಿತನದಿಂದಾಗಿಯೇ ಹೆಚ್ಚುಹೆಚ್ಚು ಆಂದೋಲನ ಜೀವಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಈಗಲಾದರೂ ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಬೇಕು ಎಂದು ಸಂಘಟನೆಯು ಪ್ರಕಟಣೆಯಲ್ಲಿ ಒತ್ತಾಯಿಸಿದೆ.

‘ಹಸಿವಿನ ವ್ಯಾಪಾರ ಸಲ್ಲದು’

ಗಾಜಿಯಾಬಾದ್‌: ‘ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ನಡೆಸಲು ಬಿಡುವುದಿಲ್ಲ’ ಎಂದು ರೈತ ಮುಖಂಡ, ಭಾರತೀಯ ಕಿಸಾನ್‌ ಯೂನಿಯನ್‌ನ ವಕ್ತಾರ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಧಾನಿಯ ಭಾಷಣ ಮುಗಿದ ಕೆಲವೇ ಕ್ಷಣಗಳಲ್ಲಿ ಟಿಕಾಯತ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ನಡೆಯದು. ಹಸಿವು ಹೆಚ್ಚಿದರೆ ಧಾನ್ಯದ ಬೆಲೆಯು ಸಹ ಅದಕ್ಕೆ ಅನುಗುಣವಾಗಿ ನಿರ್ಧಾರವಾಗಬಹುದು. ವಿಮಾನದ ಟಿಕೆಟ್‌ಗಳು ದಿನಕ್ಕೆ ಮೂರು ನಾಲ್ಕು ಬಾರಿ ದರ ಏರಿಕೆ ಇಳಿಕೆ ಆದಂತೆ ಧಾನ್ಯದ ಬೆಲೆಯನ್ನೂ ಏರಿಳಿತ ಮಾಡಲು ಬಿಡೆವು. ಹಸಿವಿನ ಮೇಲೆ ವ್ಯಾಪಾರ ನಡೆಸಲು ಇಚ್ಛಿಸುವವರನ್ನು ದೇಶದಿಂದ ಹೊರಗಟ್ಟಲಾಗುವುದು ಎಂದು ಅವರು ಹೇಳಿದರು.

ಎಂಎಸ್‌ಪಿ ಬಗ್ಗೆ ಮಾತನಾಡುತ್ತಾ, ‘ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕಾನೂನು ಇಲ್ಲ ಎಂಬ ಕಾರಣಕ್ಕೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿಯೇ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಖರೀದಿಸುವ ಮೂಲಕ ವ್ಯಾಪಾರಿಗಳು ರೈತರ ಶೋಷಣೆ ಮಾಡುತ್ತಾರೆ. ಇಲ್ಲಿ ಸಣ್ಣ ರೈತ– ದೊಡ್ಡ ರೈತ ಎಂಬ ಪ್ರಶ್ನೆ ಇಲ್ಲ. ಚಳವಳಿಯು ಎಲ್ಲಾ ರೈತರಿಗೆ ಸಂಬಂಧಿಸಿದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT