ಶನಿವಾರ, ಅಕ್ಟೋಬರ್ 23, 2021
20 °C

ಛತ್ತೀಸ್‌ಗಡ, ಮೇಘಾಲಯದಲ್ಲೂ ಹೊಸ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಗುವಾಹಟಿ: ಪಂಜಾಬ್‌ನಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ, ಛತ್ತೀಸ್‌ಗಡ ಹಾಗೂ ಮೇಘಾಲಯದಲ್ಲೂ ಅದೇ ಪರಿಸ್ಥಿತಿ ಎದುರಿಸುವ ಸನ್ನಿವೇಶ ಎದುರಾಗಿದೆ.

ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಬದಲಾವಣೆಯನ್ನು ತಡೆಯುವುದಕ್ಕಾಗಿ, ಅವರಿಗೆ ನಿಷ್ಠರಾದ ಶಾಸಕರ ತಂಡವು ದೆಹಲಿಯಲ್ಲಿ ಬೀಡುಬಿಟ್ಟಿದ್ದರೆ, ಇತ್ತ ಮೇಘಾಲಯದಲ್ಲಿ ಅಸಮಾಧಾನಗೊಂಡಿರುವ ಶಾಸಕರು ತೃಣಮೂಲ ಕಾಂಗ್ರೆಸ್‌ ಸೇರುವ ಸನ್ನಾಹದಲ್ಲಿದ್ದಾರೆ.

ನವಜೋತ್‌ ಸಿಂಗ್ ಸಿಧು, ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಿಷಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಹೇಳಿದೆ. ಸಿಧು ಕೂಡ ತಮಗೆ ಪಕ್ಷದಲ್ಲಿ ಸ್ಥಾನವಿದ್ದರೂ ಇರದಿದ್ದರೂ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪರ ನಿಲ್ಲುವುದಾಗಿ ಹೇಳಿದ್ದಾರೆ.

ಹೀಗಾಗಿ, ರಾಜ್ಯದ ಕೆಲವು ಮುಖಂಡರ ವಿರೋಧ ಇದ್ದಾಗಲೂ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಸಿಧು ಅವರನ್ನೇ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ಸ್ಥಾನದಲ್ಲಿ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಛತ್ತೀಸ್‌ಗಡದಲ್ಲಿ ಬಘೇಲ್ ಹಾಗೂ ಸಚಿವ ಟಿ.ಎಸ್‌.ಸಿಂಗ್ ದಿಯೊ ಅವರ ನಡುವಿನ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದರಿಂದ, ಈಗ ದಿಯೊ ಅವರ ಸರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ದಿಯೊ, ಹೈಕಮಾಂಡ್‌ ಸೂಚನೆಗಾಗಿ ಕಾಯುತ್ತಿದ್ದರೆ, ಅತ್ತ ಬಘೆಲ ನಿಷ್ಠರು ದೆಹಲಿಗೆ ದೌಡಾಯಿಸಿದ್ದಾರೆ.

ಮೇಘಾಲಯದಲ್ಲಿ, ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಕೇಂದ್ರದ ಮಾಜಿ ಸಚಿವ ವಿನ್ಸೆಂಟ್‌ ಪಾಲಾ ಅವರನ್ನು ನೇಮಕ ಮಾಡಿರುವುದಕ್ಕೆ, ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಮತ್ತು ಕೆಲವು ಶಾಸಕರ ಗುಂಪು ಅಸಮಾಧಾನಗೊಂಡಿದೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮುಕುಲ್‌ ಸಂಗ್ಮಾ, ಇತ್ತೀಚೆಗೆ ಕೋಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್‌ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದಾಗಿಯೂ ವರದಿಯಾಗಿದೆ.

ಪಂಜಾಬ್‌ ರೀತಿಯ ಮತ್ತೊಂದು ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಡೆಯುವುದಕ್ಕಾಗಿ, ಭಾನುವಾರ ದೆಹಲಿಗೆ ಬರುವಂತೆ ಸಂಗ್ಮಾ ಅವರಿಗೆ ಸೋನಿಯಾಗಾಂಧಿ ಸೂಚಿಸಿದ್ದಾರೆ.

ಸಂಗ್ಮಾ ಮತ್ತು ಅಸಮಾಧಾನಗೊಂಡ ಕೆಲವು  ಶಾಸಕರೂ ಸೋನಿಯಾ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದ್ದು, ಈ ಭೇಟಿಯ ನಂತರ ತಮ್ಮ ಮುಂದಿನ ನಡೆಯನ್ನು ನಿರ್ಧರಿಸುವ ಸಾಧ್ಯತೆ ಇದೆ.

‘ಛತ್ತೀಸ್‌ಗಡ ಪಂಜಾಬ್‌ ಆಗದು’

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಘೆಲ್‌, ‘ಛತ್ತೀಸ್‌ಗಡ ಎಂದಿಗೂ ಪಂಜಾಬ್‌ ಆಗುವುದಿಲ್ಲ. ಪಂಜಾಬ್‌ ಮತ್ತು ಛತ್ತೀಸಗಡದ ನಡುವೆ ಇರುವ ಏಕೈಕ ಸಾಮ್ಯತೆ ಎಂದರೆ, ಎರಡೂ ರಾಜ್ಯಗಳ ಹೆಸರಿನಲ್ಲಿ ಸಂಖ್ಯೆ ಇರುವುದು’ ಎಂದಿದ್ದಾರೆ.

‘ಶಾಸಕರು ಹೊರಗೆ ಎಲ್ಲಿಯೂ ಹೋಗಬಾರದೇ? ಎಲ್ಲಾ ನಡೆಗಳನ್ನೂ ರಾಜಕೀಯ ನಡೆ ಎಂದು ಪರಿಗಣಿಸಬಾರದು. ನೀವೂ ಕೂಡ (ಪತ್ರಕರ್ತರಿಗೆ) ನಿಮ್ಮ ಸ್ನೇಹಿತರ ಜೊತೆ ಸುತ್ತಾಡಲು ಹೋಗತ್ತೀರ. ಅದನ್ನೂ ಸುದ್ದಿ ಹುಡುಕಾಟ ಎನ್ನಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು