ರಾಜಕೀಯ ಸಂಚಲನ ಮೂಡಿಸಿದ ಲಾಲೂ ಆಡಿಯೊ ಕ್ಲಿಪ್

ಪಟ್ನಾ: ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ಪತನಕ್ಕೆ ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಜೈಲಿನೊಳಗಿದ್ದುಕೊಂಡೇ ಸಂಚು ರೂಪಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಆರೋಪಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಮಂಗಳವಾರ ರಾತ್ರಿ ಈ ಕುರಿತು ಟ್ವೀಟ್ ಮಾಡಿದ್ದ ಸುಶೀಲ್ ಕುಮಾರ್ ಮೋದಿ, ‘ಜೈಲಿನೊಳಗಿರುವ ಲಾಲೂ ಅವರಿಗೆ ಮೊಬೈಲ್ ಲಭ್ಯವಿದ್ದು, ಇದರ ಮುಖಾಂತರ ಎನ್‌ಡಿಎ ಶಾಸಕರಿಗೆ ಕರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಟ್ವೀಟ್ ಬೆನ್ನಲ್ಲೇ ಆಡಿಯೊ ಕ್ಲಿಪ್ ಒಂದನ್ನು ಸುಶೀಲ್ ಕುಮಾರ್ ಅವರು ಅಪ್‌ಲೋಡ್ ಮಾಡಿದ್ದು, ಲಾಲೂ ಪ್ರಸಾದ್ ಹಾಗೂ ಬಿಜೆಪಿ ಪಕ್ಷದ ಶಾಸಕರೊಬ್ಬರ ನಡುವಿನ ಸಂಭಾಷಣೆ ಇದರಲ್ಲಿದೆ. ಈ ಒಂದೂವರೆ ನಿಮಿಷದ ಆಡಿಯೊದಲ್ಲಿ ತಮ್ಮ ಶೈಲಿಯಲ್ಲೇ ಲಾಲೂ ಪ್ರಸಾದ್ ಅವರು ಪೀರ್‌ಪೈಂತಿ ಶಾಸಕ ಲಲನ್ ಕುಮಾರ್ ಅವರ ಜೊತೆ ಮಾತನಾಡುತ್ತಿರುವುದು ದಾಖಲಾಗಿದೆ.
लालू यादव ने दिखाई अपनी असलियत
लालू प्रसाद यादव द्वारा NDA के विधायक को बिहार विधान सभा अध्यक्ष के लिए होने वाले चुनाव में महागठबंधन के पक्ष में मतदान करने हेतु प्रलोभन देते हुए। pic.twitter.com/LS9968q7pl
— Sushil Kumar Modi (@SushilModi) November 25, 2020
ಸಂಭಾಷಣೆಯಲ್ಲೇನಿದೆ?: ‘ನಾವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಸಭಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸಲು ಸಹಾಯ ಮಾಡಿ’ ಎಂದು ಲಾಲೂ ಪ್ರಸಾದ್ ಹೇಳಿರುವುದು ಆಡಿಯೊದಲ್ಲಿದೆ. ಪಕ್ಷದ ವಿರುದ್ಧವೇ ಮತ ಚಲಾಯಿಸಿದರೆ ಮುಂದೆ ಆಗಬಹುದಾದ ಸಂಕಷ್ಟಗಳ ಬಗ್ಗೆ ಲಲನ್ ಕುಮಾರ್ ಅವರು ವಿವರಿಸುತ್ತಿರುವುದೂ ದಾಖಲಾಗಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಲಾಲೂ, ‘ನೀವೇನೂ ಚಿಂತೆ ಮಾಡಬೇಕಾಗಿಲ್ಲ. ನಾವು ನಮ್ಮ ಸಭಾಧ್ಯಕ್ಷರನ್ನೇ ಹೊಂದಿರಲಿದ್ದೇವೆ. ಈ ಸರ್ಕಾರವನ್ನು ಪತನಗೊಳಿಸಿ, ನಮ್ಮ ಸರ್ಕಾರವನ್ನು ರಚಿಸಿದ ಬೆನ್ನಲ್ಲೇ ನಿಮಗೆ ಇನ್ನಷ್ಟು ಸಹಾಯ ಮಾಡುತ್ತೇವೆ’ ಎಂದಿದ್ದಾರೆ.
ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಶಾಸಕ ಲಲನ್ ಕುಮಾರ್ ಆಗ್ರಹಿಸಿದ್ದು, ಸುಶೀಲ್ ಕುಮಾರ್ ಅವರು ತನ್ನ ಜೊತೆಗಿದ್ದಾಗಲೇ ಈ ಕರೆ ಬಂದಿತ್ತು, ಈ ವಿಷಯ ಕರೆ ಮಾಡಿದ್ದ ಲಾಲೂ ಪ್ರಸಾದ್ ಅವರಿಗೆ ತಿಳಿದಿರಲಿಲ್ಲ ಎಂದಿದ್ದಾರೆ. ‘ನಾನು ಸುಶೀಲ್ ಕುಮಾರ್ ಮೋದಿ ಅವರ ಜೊತೆ ಸಭೆಯಲ್ಲಿದ್ದಾಗ, ಬಳಿ ಬಂದ ನನ್ನ ಸಹಾಯಕ ಸಿಬ್ಬಂದಿ ಮೊಬೈಲ್‌ಗೆ ಲಾಲೂ ಪ್ರಸಾದ್ ಅವರಿಂದ ಕರೆ ಬಂದಿದೆ ಎಂದರು. ನನಗೆ ಆಶ್ಚರ್ಯವಾಗಿತ್ತು. ಇತರರಂತೆ ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ತಿಳಿಸಲು ಕರೆ ಮಾಡಿರಬಹುದು ಎಂದುಕೊಂಡಿದ್ದೆ. ಅವರು ಹಿರಿಯ ರಾಜಕಾರಣಿಯಾಗಿದ್ದ ಕಾರಣ ನಮಸ್ಕರಿಸಿದೆ. ಅವರು ಸರ್ಕಾರವನ್ನು ಪತನಗೊಳಿಸುವ ಕುರಿತು ಮಾತನಾಡಿದರು. ಪಕ್ಷದ ಶಿಸ್ತಿಗೆ ನಾನು ಬದ್ಧ ಎಂದು ತಿಳಿಸಿದೆ’ ಎಂದು ಲಲನ್ ಹೇಳಿದರು. ‘ನಂತರದಲ್ಲಿ ಈ ವಿಷಯವನ್ನು ಸುಶೀಲ್ ಕುಮಾರ್ ಮೋದಿ ಅವರಿಗೆ ತಿಳಿಸಿದೆ’ ಎಂದರು.
‘ರಾಂಚಿಯಿಂದ ಎನ್‌ಡಿಎ ಶಾಸಕರಿಗೆ ಕರೆ ಮಾಡಿದ್ದ ಲಾಲೂ ಪ್ರಸಾದ್ ಯಾದವ್, ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಲಾಲೂ ಪ್ರಸಾದ್ ಕರೆ ಮಾಡಿದ್ದ ಸಂಖ್ಯೆಗೆ ನಾನು ಕರೆ ಮಾಡಿದಾಗ, ಲಾಲೂ ಅವರೇ ನೇರವಾಗಿ ಫೋನ್ ತೆಗೆದರು. ಜೈಲಿನೊಳಗಿದ್ದುಕೊಂಡು ಈ ರೀತಿ ಕುತಂತ್ರ ಮಾಡಬೇಡಿ. ನೀವು ಯಶಸ್ವಿ ಆಗುವುದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಮಂಗಳವಾರ ರಾತ್ರಿ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದರು.
ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಹಾರ ಉಪಮುಖ್ಯಮಂತ್ರಿ ತಾರ್ ಕಿಶೋರ್ ಪ್ರಸಾದ್, ‘ಈ ವಿಷಯದ ಕುರಿತು ತನಿಖೆ ನಡೆಸಲು ಜಾರ್ಖಂಡ್ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡುತ್ತೇವೆ’ ಎಂದರು.
‘ಲಾಲೂ ಪ್ರಸಾದ್ ಅವರು ಜಿಲ್ಲಾಡಳಿತದ ಒಪ್ಪಿಗೆಯ ಮೇರೆಗೆ ರಿಮ್ಸ್(ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ನಿರ್ದೇಶಕರ ಬಂಗಲೆಯಲ್ಲಿ ಇದ್ದಾರೆ. ರಾಂಚಿ ಜಿಲ್ಲಾಡಳಿತವು, ಲಾಲೂ ಪ್ರಸಾದ್ ಅವರ ಭೇಟಿಗೆ ಬರುವವರು ಹಾಗೂ ಇತರೆ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಜಾರ್ಖಂಡ್ ಐಜಿ(ಕಾರಾಗೃಹ) ವೀರೇಂದ್ರ ಭೂಷಣ್ ತಿಳಿಸಿದ್ದಾರೆ.
‘ಸರ್ಕಾರ ಪತನಗೊಳ್ಳುತ್ತದೆ’
ಲಾಲೂ ಪ್ರಸಾದ್ ಆಡಿಯೊ ಕ್ಲಿಪ್ ಕುರಿತು ಆರ್‌ಜೆಡಿ ನಾಯಕರು ಮೌನವಹಿಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ಮಾತನಾಡಿದ ಆರ್‌ಜೆಡಿ ಶಾಸಕ ಮುಕೇಶ್ ರೌಶನ್, ‘ಮಾರ್ಚ್‌ನಲ್ಲಿ ಮಹತ್ತರ ಬದಲಾವಣೆಯನ್ನು ನೀವು ಕಾಣಲಿದ್ದೀರಿ. ಈ ಸರ್ಕಾರ ಪತನಗೊಂಡು, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುತ್ತಾರೆ. ಎಲ್ಲ ಪಕ್ಷದ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಕಾದು ನೋಡಿ’ ಎಂದಿದ್ದಾರೆ.
ಸ್ಪೀಕರ್ ಆಗಿ ವಿಜಯ್ ಕುಮಾರ್ ಸಿನ್ಹಾ
ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಅವರು ಬಿಹಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾದರು.
ಮಹಾ ಮೈತ್ರಿ ಕೂಟ ಆರ್‌ಜೆಡಿಯ ಅವಧ್ ಬಿಹಾರಿ ಚೌಧರಿ ಅವರನ್ನು ಕಣಕ್ಕಿಳಿಸಿತ್ತು. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ವಿಜಯ್ ಕುಮಾರ್ 126 ಮತಗಳನ್ನು ಪಡೆದು ವಿಜೇತರಾದರು. ಅವಧ್ ಅವರಿಗೆ 114 ಮತಗಳು ದೊರೆತವು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರು. ಹಾಗಾಗಿ ಅವರು ಮತದಾನದ ವೇಳೆ ಇಲ್ಲಿ ಹಾಜರಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.
ಮುಖ್ಯಮಂತ್ರಿಗಳು ಸಭಾ ನಾಯಕರಾಗಿರುವುದರಿಂದ ಅವರ ಉಪಸ್ಥಿತಿ ನ್ಯಾಯ ಸಮ್ಮತವಾಗಿದೆ ಎಂದು ಪ್ರತಿಪಾದಿಸುವ ಮೂಲಕ ವಿರೋಧ ಪಕ್ಷದ ಆಕ್ಷೇಪವನ್ನು ನಿರಾಕರಿಸಿ, ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.