ಬುಧವಾರ, ಮೇ 19, 2021
21 °C
ವೈದ್ಯರು, ಸಿಬ್ಬಂದಿ, ಆಮ್ಲಜನಕ, ರೆಮ್‌ಡಿಸಿವಿರ್‌ ಕೊರತೆ; ಗೂಡ್ಸ್‌ ವಾಹನಗಳಲ್ಲೇ ಶವ ಸಾಗಣೆ

ಅಫಜಲಪುರ: ಇನ್ನೂ ಕೆಲವರ ಸ್ಥಿತಿ ಗಂಭೀರ, ಗೂಡ್ಸ್‌ ವಾಹನಗಳಲ್ಲೇ ಶವ ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಅಗತ್ಯ ಆಮ್ಲಜನಕ ಇಲ್ಲ, ರೆಮ್‌ಡಿಸಿವಿರ್‌ ಇಲ್ಲ, ತಜ್ಞವೈದ್ಯರಿಲ್ಲ, ಸ್ವಚ್ಛತಾ ಕಾರ್ಮಿಕರಿಲ್ಲ, ಕನಿಷ್ಠ ಪಕ್ಷ ಹ್ಯಾಂಡ್‌ಗ್ಲೌಸ್‌ಗಳೂ ಇಲ್ಲ. ಇಷ್ಟೊಂದು ಇಲ್ಲಗಳ ನಡುವೆಯೂ 50 ಬೆಡ್‌ಗಳ ಕೋವಿಡ್‌ ಚಿಕಿತ್ಸಾ ಘಟಕ ನಿರ್ಮಿಸಲಾಗಿದೆ!

ಆಮ್ಲಜನಕದ ಕೊರತೆಯಿಂದ ಮಂಗಳವಾರ ನಾಲ್ವರು ಸೋಂಕಿತರು ಮೃತಪಟ್ಟ ಘಟನೆಯ ಬಳಿಕ ಈ ಆಸ್ಪತ್ರೆಯ ಅವ್ಯವಸ್ಥೆ ಬಹಿರಂಗಗೊಂಡಿದೆ. ‘ಇನ್ನೂ ನಾಲ್ವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಬುಧವಾರ ಬೆಳಿಗ್ಗೆಯಷ್ಟರಲ್ಲಿ ಸಿಲಿಂಡರ್‌ ಬರದಿದ್ದರೆ ಅವರ ಸ್ಥಿತಿ ಕೂಡ ಗಂಭೀರವಾಗಲಿದೆ’ ಎಂದು ಅಡ್ಮಿಟ್‌ ಆದ ಸೋಂಕಿತರೊಬ್ಬರ ಸಂಬಂಧಿ ಹೇಳಿದ್ದಾರೆ.

100 ಬೆಡ್‌ನ ಈ ಆಸ್ಪತ್ರೆಯಲ್ಲಿ 50 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗಾಗಿಯೇ ಮೀಸಲಿಡಲಾಗಿದೆ. ಈಗಾಗಲೇ 35 ಸೋಂಕಿತರು ಅಡ್ಮಿಟ್‌ ಆಗಿದ್ದಾರೆ. ಆದರೆ, ಮಂಗಳವಾರದವರೆಗೂ ಲಭ್ಯವಿದ್ದ ಆಮ್ಲಜಕನದ ಸಿಲಿಂಡರ್‌ಗಳ ಸಂಖ್ಯೆ ಕೇವಲ 6.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯೂ ಸೇರಿ ಕೇವಲ ಎಂಟು ವೈದ್ಯರು ಇಲ್ಲಿದ್ದಾರೆ. ಅವರಲ್ಲಿ ಈಗಾಗಲೇ ಮೂವರಿಗೆ ವೈರಾಣು ಅಂಟಿಕೊಂಡಿದ್ದು, ಕ್ವಾರಂಟೈನ್‌ ಆಗಿದ್ದಾರೆ. ಬೆರಳೆಣಿಕೆಯಷ್ಟು ಮಾತ್ರ ಸ್ಟಾಫ್‌ನರ್ಸ್‌ ಹಾಗೂ ಡಿ ದರ್ಜೆ ನೌಕರರು ಇದ್ದಾರೆ. ಸ್ವಚ್ಛತಾ ಸಿಬ್ಬಂದಿಯನ್ನು ಕೋವಿಡ್‌ ವಾರ್ಡ್‌ಗೆ ಕಳಿಸಿದ್ದರಿಂದ ಸಾಮಾನ್ಯ ವಾರ್ಡ್‌ನಲ್ಲಿ ನಿರ್ವಹಣೆ ಇಲ್ಲವಾಗಿದೆ.

‘ಸ್ವತಃ ನಾನೇ ಕಲಬುರ್ಗಿಗೆ ಹೋಗಿ ಅಲೆದು ರೆಮ್‌ಡಿಸಿವಿರ್‌ ಇಂಜಕ್ಷನ್‌ ತರುವ ಸ್ಥಿತಿ ಇದೆ. ಎಲ್ಲಿ ಕೇಳಿದರೂ ಇಂಜಕ್ಷನ್‌ ಇಲ್ಲ ಎಂದೇ ಹೇಳುತ್ತಾರೆ. ಈ ಕಾರಣಕ್ಕಾಗಿಯೇ ‘ಸತ್ತರೂ ಮನೆಯಲ್ಲೇ ಸಾಯೋಣ, ಇಂಥ ಆಸ್ಪತ್ರೆಗೆ ಹೋಗಿ ಮಾಡುವುದೇನು?’ ಎಂದು ನಮ್ಮ ಸ್ನೇಹಿತರೊಬ್ಬರು ಮನೆಯಲ್ಲೇ ಉಳಿದಿದ್ದರು. ನಿನ್ನೆಯೇ ಅವರು ತೀರಿಕೊಂಡರು’ ಎಂಬುದು ಅಫಜಲಪುರ ಪುರಸಭೆ 7ನೇ ವಾರ್ಡ್‌ ಸದಸ್ಯ ಚಂದ್ರಶೇಖರ ಶ್ರೀಮಂತ ದೇಸಾಯಿ ಅವರ ಮಾಹಿತಿ.

ಗೂಡ್ಸ್‌ ವಾಹನದಲ್ಲೇ ಶವ ಸಾಗಣೆ: ಆಸ್ಪತ್ರೆಯಲ್ಲಿ ಎರಡೇ ಆಂಬುಲೆನ್ಸ್‌ ಇವೆ. ಅವುಗಳನ್ನು ಸೋಂಕಿತರ ಕರೆತರಲು ಬಳಸುತ್ತಾರೆ. ಕೋವಿಡ್‌ನಿಂದ ಸತ್ತವರ ದೇಹಗಳನ್ನು ನಿಯಮಾನುಸಾರ ಸಾಗಿಸಲು ವ್ಯವಸ್ಥೆ ಇಲ್ಲ. ಅನಿವಾರ್ಯವಾಗಿ ₹ 1,000 ಬಾಡಿಗೆ ಕೊಟ್ಟು ಗೂಡ್ಸ್‌ ವಾಹನದಲ್ಲೇ ಶವ ಸಾಗಿಸಬೇಕಾಗಿದೆ.

ಮಾತ್ರವಲ್ಲ; ಶವಗಳನ್ನು ವಾಹನದಲ್ಲಿ ಹಾಕಲೂ ಇಲ್ಲಿ ಸಿಬ್ಬಂದಿ ಇಲ್ಲ. ಮೃತರ ಸಂಬಂಧಿಕರು, ಸ್ನೇಹಿತರೇ ಇದಕ್ಕೆ ನೆರವಾಗಬೇಕು. ಹೀಗೆ ಸಹಾಯಕ್ಕೆ ಬಂದವರಿಗೆ ಒಂದು ಜೊತೆ ಹ್ಯಾಂಡ್‌ಗ್ಲೌಸ್‌ ಕೇಳಿದರೂ ಇಲ್ಲ ಎನ್ನುತ್ತಾರೆ. ಬರಿಗೈಯಿಂದಲೇ ದೇಹಗಳನ್ನು ಸಾಗಿಸುವುದು ಇಲ್ಲಿ ಸಮಾನ್ಯವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಇನ್ನೂ ಕೆಲವರು ಗಂಭೀರ’

‌ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹಾಂತಪ್ಪ ಹಾಳಮಳ ಅವರೊಬ್ಬರೇ ಇಲ್ಲಿ ಜನರ ಸ್ಪಂದನೆಗೆ ಸಿಗುತ್ತಾರೆ. ಸರಿಯಾದ ಚಿಕಿತ್ಸೆ ಸಿಗದ ಕಾರಣ ದಿನವಿಡೀ ಆಸ್ಪತ್ರೆಯಲ್ಲಿ ತಂಟೆ ತಕರಾರು ನಡೆದಿವೆ. ಅಸ್ಪತ್ರೆಗೆ ಬರದೇ ಮನೆಯಲ್ಲಿ ಸತ್ತವರು ಎಷ್ಟೋ ಏನೋ!

–ಚಂದ್ರಶೇಖರ ಶ್ರೀಮಂತ ದೇಸಾಯಿ, ಪುರಸಭೆ ಸದಸ್ಯ, ಅಫಜಲಪುರ

‘ತಡವಾಗಿ ಬಂದವರು ಬದುಕುವುದು ಕಷ್ಟ’

ಗಂಭೀರ ಸ್ವರೂಪ ಇದ್ದ ರೋಗಿಗಳ ಸಂಬಂಧಿಕರಿಗೆ ಮುಂಚಿತವಾಗಿಯೇ ಪರಿಸ್ಥಿತಿ ತಿಳಿಸುವುದು ಅನಿವಾರ್ಯವಾಗಿದೆ. ಹೊರಗಿನಿಂದ ನಾವು ಎಷ್ಟೇ ಆಮ್ಲಜನಕ ಕೊಟ್ಟರೂ ರೋಗಿಯ ದೇಹ ಸ್ಪಂದಿಸದಿದ್ದರೆ ಏನು ಮಾಡುವುದು? ಆಮ್ಲಜನಕ ಸಿಕ್ಕರೆ ಖಂಡಿತಾ ಬದುಕುತ್ತಾರೆ ಎಂದು ಹೇಳಲೂ ಆಗುವುದಿಲ್ಲ.

ಮುಂಜಾಗೃತೆ ವಹಿಸುವುದು ಮುಖ್ಯ. ತುಂಬ ಗಂಭೀರ ಪರಿಸ್ಥಿತಿ ತಲುಪಿದಾಗ, ತಡವಾಗಿ ಆಸ್ಪತ್ರೆಗೆ ಬಂದು ಸೇರಿದರೆ ನಾವು ಮಾಡುವ ಎಲ್ಲ ಪ್ರಯತ್ನ ಮಾಡಿದ ಮೇಲೂ, ರೋಗಿಯ ದೇಹ ಸ್ಪಂದಿಸುವುದಿಲ್ಲ.

–ಡಾ.ಮಹಾಂತಪ್ಪ ಹಾಳಮಳ, ಆಡಳಿತ ವೈದ್ಯಾಧಿಕಾರಿ, ತಾಲ್ಲೂಕು ಆಸ್ಪತ್ರೆ, ಅಫಜಲಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು