ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ’ಕ್ಕೆ ವಿರೋಧಿಸಿ ‘ಬಂದ್‌’: ಕೆಲವೆಡೆ ಸಂಚಾರ ಅಸ್ತವ್ಯಸ್ತ

‘ಅಗ್ನಿಪಥ’ಕ್ಕೆ ವಿರೋಧ: ದೆಹಲಿ, ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಕೇರಳ, ಅಸ್ಸಾಂ, ರಾಜಸ್ಥಾನದಲ್ಲಿ ಪ್ರತಿಭಟನೆ
Last Updated 20 ಜೂನ್ 2022, 18:21 IST
ಅಕ್ಷರ ಗಾತ್ರ

ನವದೆಹಲಿ/ಪಟ್ನಾ: ರಕ್ಷಣಾ ಪಡೆಯಲ್ಲಿ ಅಲ್ಪಾವಧಿ ನೇಮಕದ ‘ಅಗ್ನಿಪಥ ಯೋಜನೆ’ ವಿರುದ್ಧ ನೀಡಲಾಗಿದ್ದ ‘ಭಾರತ್‌ ಬಂದ್‌’ ಕರೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವು ರಾಜ್ಯಗಳಲ್ಲಿ ಪ್ರತಿಭಟನೆಯ ಬಿರುಸು ಸ್ವಲ್ಪ ಕಡಿಮೆಯಾಗಿದೆ. ಭದ್ರತೆ ಮತ್ತು ನಿರ್ಬಂಧಗಳ ಹೇರಿಕೆಯು ಪ್ರತಿಭಟನೆಯ ಬಿರುಸು ಕಡಿಮೆಯಾಗಲು ಕಾರಣ.

ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಯೋಜನೆಯನ್ನು ಬಲವಾಗಿ ವಿರೋಧಿಸಿವೆ. ಹಾಗಿದ್ದರೂ ಯೋಜನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

ಬಂದ್‌ಗೆ ಯಾವುದೇ ಸಂಘಟನೆ ಕರೆ ಕೊಟ್ಟಿಲ್ಲ. ಬದಲಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಕರೆ ಕೊಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ, ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ, ಕೇರಳ, ಅಸ್ಸಾಂ, ಜಮ್ಮು–ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಹರಿಯಾಣ, ಪಂಜಾಬ್‌ ಮತ್ತು ಜಮ್ಮುವಿನ ಕೆಲವು ಕಡೆ ಪ್ರತಿಭಟನೆ ನಡೆದಿವೆ.

ಉತ್ತರ ಪ್ರದೇಶದಲ್ಲಿ ರಾಜ್ಯ ಪೊಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆಯ 151 ತುಕಡಿಗಳನ್ನು ನಿಯೋಜಿಸಲಾಗಿತ್ತು. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿರುವ ಬಿಹಾರದ 17 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಲವು ಪ್ರದೇಶಗಳಲ್ಲಿ ಪೊಲೀಸ್‌ ಮತ್ತು ಅರೆ ಸೇನಾ ಪಡೆಗಳನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಜಾರ್ಖಂಡ್‌ನಲ್ಲಿ ಸೋಮವಾರ 5 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶಾಲೆಗಳಿಗೆ ರಜೆ ನೀಡಲಾಗಿತ್ತು. ರಾಜ್ಯದ ವಿವಿಧ ನಗರಗಳಲ್ಲಿ ಅಂಗಡಿ ಮತ್ತು ಇತರ ವಹಿವಾಟುಗಳು ಸುಗಮವಾಗಿ ನಡೆದಿವೆ. ಯಾವುದೇ ಅಹಿತಕರ ಘಟನೆ ವರದಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮುವಿನಲ್ಲಿಯೂ ಸೋಮವಾರ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್‌, ಎಎಪಿ ಕಾರ್ಯಕರ್ತರು ಮತ್ತು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಸ್ತೆ ತಡೆಯನ್ನೂ ನಡೆಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿವಿಧ ರಾಜ್ಯಗಳಲ್ಲಿ ನೂರಾರು ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆಯ ಹಿಂದೆ ಕೋಚಿಂಗ್ ಕೇಂದ್ರಗಳ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. \

ಕಾಂಗ್ರೆಸ್ ಪ್ರಶ್ನೆ: ಸೇನಾ ಪ‍ಡೆಗಳ ಮುಖ್ಯಸ್ಥರಾಗಿದ್ದ ಜ. ಬಿಪಿನ್‌ ರಾವತ್‌ ಅವರು ಸೈನಿಕರು ಮತ್ತು ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೆ ಹೆಚ್ಚಿಸಬೇಕು ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ 2020ರಲ್ಲಿ ಸಲ್ಲಿಸಿದ್ದರು. ಹಾಗಾಗಿ, ಈಗಿನ ಅಗ್ನಿಪಥ ಯೋಜನೆಯು ರಾವತ್‌ ಅವರಿಗೆ ಮಾಡಿದ ಅವಮಾನವಲ್ಲವೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್‌ ಅವರು ಈ ಪ್ರಶ್ನೆ ಕೇಳಿದ್ದಾರೆ.

‘2020ರ ಅಕ್ಟೋಬರ್‌ನಲ್ಲಿನ ಸುತ್ತೋಲೆಯಲ್ಲಿ ರಾವತ್‌ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ಸಂದರ್ಶನವೊಂದರಲ್ಲಿಯೂ ಇದನ್ನು ಅವರು ಪ್ರಸ್ತಾಪಿಸಿದ್ದರು. ಸೈನಿಕರು 17 ವರ್ಷದಲ್ಲಿ ನಿವೃತ್ತರಾಗುತ್ತಾರೆ. ಅವರ ನಿವೃತ್ತಿ ವಯಸ್ಸನ್ನು 58ಕ್ಕೆ ಏರಿಸಬೇಕು’ ಎಂದು ಅವರು ಹೇಳಿದ್ದರು ಎಂದು ಮಾಕನ್‌ ಉಲ್ಲೇಖಿಸಿದ್ದಾರೆ.

ರಾವತ್‌ ಅವರೇ ಹೀಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಏನನ್ನಾದರೂ ಹೇಳಲು ಅವರಿಗಿಂತ ಹೆಚ್ಚು ಅರ್ಹತೆ ಇರುವವರು ಯಾರಿದ್ದಾರೆ? ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ರಾವತ್‌ ಅವರ ಚಿಂತನೆಗಳಿಗೆ ವಿರುದ್ಧವಾಗಿದ್ದಾರೆಯೇ ಎಂದು ಮಾಕನ್ ಪ್ರಶ್ನಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಜತೆಗೆ ಪ್ರಜಾಸತ್ತಾತ್ಮಕ ಸಮಾಲೋಚನೆಗಳ ಕೊರತೆ ಮತ್ತು ಸಂಸತ್ತಿನಲ್ಲಿ ಚರ್ಚೆಯ ಕೊರತೆಯಿಂದಾಗಿ ಸರ್ಕಾರ ಕೈಗೊಳ್ಳುವ ಮಹತ್ವದ ನಿರ್ಧಾರಗಳಿಗೆ ಸ್ಥಿರತೆಯೇ ಇರುವುದಿಲ್ಲ ಎಂದರು.

‘ನೋಟು ರದ್ದತಿಯು 50 ದಿನಗಳಲ್ಲಿ 60, ಜಿಎಸ್‌ಟಿ 10 ತಿಂಗಳಲ್ಲಿ 376 ತಿದ್ದುಪ‍ಡಿ ಕಂಡಿವೆ. ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಎರಡೂವರೆ ವರ್ಷಗಳಾದರೂ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಅಗ್ನಿಪಥವು ಐದು ದಿನಗಳಲ್ಲಿ 11 ಬದಲಾವಣೆ ಕಂಡಿದೆ’ ಎಂದು ಅವರು ಹೇಳಿದ್ದಾರೆ.

‘ಹಿಂಸಾಚಾರ ನಡೆಸಿದ್ದು ಜಿಹಾದಿಗಳು’

ಪಟ್ನಾ: ‘ಅಗ್ನಿಪಥ’ ಯೋಜನೆ ವಿರೋಧಿ ಹೋರಾಟವು ಹಿಂಸಾಚಾರಕ್ಕೆ ತಿರುಗಿದ್ದರ ಹಿಂದೆ ಮೋದಿ ವಿರೋಧಿ ‘ಜಿಹಾದಿ’ಗಳು ಇದ್ದಾರೆ. ಹಿಂಸಾಚಾರಕ್ಕೆ ಜೆಡಿಯುನ ಪ್ರಮುಖ ನಾಯಕರು ಕುಮ್ಮಕ್ಕು ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಹರೀಶ್‌ಭೂಷಣ್‌ ಠಾಕೂರ್‌ ಬಚ್ಚೌಲ್‌ ಅವರು ಸೋಮವಾರ ಆರೋಪಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಈ ರೀತಿಯ ಘಟನೆಗಳು ಏಕೆ ನಡೆದಿರಲಿಲ್ಲ? ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕೃಪೆಗಾಗಿ ಅವರು ಹೇಳಿದಂತೆ ಕೇಳುವ ಜೆಡಿಯುನ ಪ್ರಮುಖ ನಾಯಕರನ್ನು ಹಿಂಸಾಚಾರಕ್ಕೆ ಹೊಣೆಯನ್ನಾಗಿಸಬೇಕು. ಮೋದಿ ವಿರೋಧಿ ಜಿಹಾದಿಗಳು ಈ ಹಿಂಸಾಚಾರ ನಡೆಸಿದ್ದಾರೆ. ಜೆಡಿಯು ನಾಯಕರು ತಮ್ಮ ಬೆನ್ನ ಹಿಂದೆ ಇದ್ದಾರೆ ಎಂದು ಭಾವಿಸಿ ಅವರು ಹಿಂಸಾಚಾರ ನಡೆಸಿದ್ದಾರೆ’ ಎಂದು ಹರೀಶ್‌ಭೂಷಣ್‌ ಹೇಳಿದ್ದಾರೆ.

ಹರೀಶ್ ಅವರ ಹೇಳಿಕೆಗೆ ಹಿಂದುಸ್ಥಾನ್‌ ಅವಾಮ್‌ ಮೋರ್ಚಾ ಸಂಸ್ಥಾಪಕ, ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್‌ ರಾಮ್‌ ಮಾಂಜಿ ಅವರು ಕಿಡಿಕಾರಿದ್ದಾರೆ. ‘ಅಗ್ನಿಪಥ ವಿರೋಧಿ ಹೋರಾಟಕ್ಕೆ ಹರೀಶ್‌ಭೂಷಣ್‌ ಜಿಹಾದಿ ರೂಪ ನೀಡುತ್ತಿದ್ದಾರೆ. ಈ ವ್ಯಕ್ತಿಯು ಮಾನಸಿಕ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದ್ದಾರೆ.


‘ಅಗ್ನಿಪಥ’ಕ್ಕೆ ಉದ್ಯಮ ವಲಯದ ಬೆಂಬಲ

ಅಗ್ನಿಪಥ ಯೋಜನೆಗೆ ಉದ್ಯಮ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರಾ, ಆರ್‌ಪಿಜಿ ಎಂಟರ್‌ಪ್ರೈಸಸ್‌ ಅಧ್ಯಕ್ಷ ಹರ್ಷ ಗೋಯೆಂಕಾ ಮತ್ತು ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಅವರು ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ನಾಲ್ಕು ವರ್ಷದ ಕರ್ತವ್ಯ ಪೂರೈಸಿ ಬರುವ ‘ಅಗ್ನಿವೀರ’ರಿಗೆ ಉದ್ಯಮ ವಲಯದಲ್ಲಿ ಉದ್ಯೋಗದ ಅವಕಾಶ ವ್ಯಾಪಕವಾಗಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ ಯೋಜನೆಯು ಯುವಜನರಿಗೆ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿಸುತ್ತದೆ. ಜತೆಗೆ, ಶಿಸ್ತಿನ ಹಾಗೂ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಉದ್ಯಮ ವಲಯಕ್ಕೆ ಒದಗಿಸಲಿದೆ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

ಅಗ್ನಿಪಥದ ವಿರುದ್ಧದ ಪ್ರತಿಭಟನೆಯು ಹಿಂಸೆಗೆ ತಿರುಗಿರುವುದರ ಕುರಿತು ಮಹೀಂದ್ರಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾಯಕತ್ವ ಕೌಶಲ, ತಂಡಸ್ಫೂರ್ತಿ ಮತ್ತು ದೈಹಿಕ ತರಬೇತಿಯೊಂದಿಗೆ ಹಿಂದಿರುಗುವ ಅಗ್ನಿವೀರರು ಉದ್ಯಮಕ್ಕೆ ಸನ್ನದ್ಧ ಕೆಲಸಗಾರರಾಗಿ ದೊರೆಯುತ್ತಾರೆ. ಕಾರ್ಯಾಚರಣೆ, ಆಡಳಿತ, ಪೂರೈಕೆ ಸರಪಣಿ ನಿರ್ವಹಣೆಯಂತಹ ಕೆಲಸಗಳಿಗೆ ಅವರು ಅರ್ಹರಾಗಬಹುದು’ ಎಂದು
ಮಹೀಂದ್ರಾ ಅವರು ಹೇಳಿದ್ದಾರೆ. ಅಗ್ನಿವೀರರಿಗೆ ಯಾವ ಕೆಲಸ
ನೀಡುತ್ತೀರಿ ಎಂದು ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಅವರು ಹೀಗೆ
ಉತ್ತರಿಸಿದ್ದಾರೆ.

‘ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ಆರ್‌ಪಿಜಿ ಸಮೂಹ ಕೂಡ ಸ್ವಾಗತಿಸುತ್ತದೆ’ ಎಂದು ಮಹೀಂದ್ರಾ ಅವರ ಟ್ವೀಟ್‌ಗೆ ಹರ್ಷ ಗೋಯೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.

‘ಉದ್ಯಮ ವಲಯದ ನೇಮಕಾತಿಯಲ್ಲಿ ಅಗ್ನಿವೀರರಿಗೆ ವಿಶಿಷ್ಟವಾದ ಅನುಕೂಲಗಳು ದೊರೆಯಲಿವೆ ಎಂದು ದೃಢವಾಗಿ ನಂಬಿದ್ದೇನೆ’ ಎಂದು ಮಜುಂದಾರ್ ಷಾ ಟ್ವೀಟ್‌ ಮಾಡಿದ್ದಾರೆ.


ದಿನದ ಬೆಳವಣಿಗೆ

l‌ ಬಿಹಾರದಲ್ಲಿ ಅಗ್ನಿಪಥ ವಿರೋಧಿ ಪ್ರತಿಭಟನೆಯನ್ನು ನಿಗ್ರಹಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಫಲರಾಗಿದ್ದಾರೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ

l ವಕೀಲ ಎಂ.ಎಲ್. ಶರ್ಮಾ ಎಂಬುವರು ಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ

l ಉತ್ತರ ಪ್ರದೇಶದಲ್ಲಿ ಪ್ರವಾದಿ ಕುರಿತ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿತ್ತು. ಗಾಜಿಯಾಬಾದ್‌ನಲ್ಲಿ ಸೋಮವಾರ ಪಥ
ಸಂಚಲನ ನಡೆಸಿದ ಪೊಲೀಸರು ತಮ್ಮ ಜೊತೆ ಬುಲ್ಡೋಜರ್‌ಗಳನ್ನೂ ಬಳಸಿಕೊಂಡು, ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ

***

ಅಗ್ನಿಪಥವು ಬಿಜೆಪಿಯ ಕೇಡರ್ ಸೃಷ್ಟಿ ಯೋಜನೆಯಾಗಿದೆ. ಬಿಜೆಪಿ ಅವರಿಗೆ ನಾಲ್ಕು ವರ್ಷಗಳವರೆಗೆ ಲಾಲಿಪಾಪ್ ನೀಡಲಿದೆ. ನಂತರ, ಬಿಜೆಪಿಗೆ ಮತಗಳನ್ನು ಬೇಟೆಯಾಡಲು ಇವರು ಬಳಕೆಯಾಗಲಿದ್ದಾರೆ

- ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥೆ

75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಯನ್ನು ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಸಮರ್ಥಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಪ್ರಧಾನಿ, ಗೃಹಸಚಿವರು, ರಕ್ಷಣಾ ಸಚಿವರು ಎಲ್ಲಿ ಹೋದರು?

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಲಾಕ್‌ಡೌನ್ ಹೇರಿಕೆ ಹಾಗೂ ನೋಟು ರದ್ದತಿ ಜಾರಿಗೆ ಕೇಂದ್ರ ಸರ್ಕಾರ ತೋರಿದ ಆತುರವನ್ನೇ ಅಗ್ನಿಪಥ ಯೋಜನೆ ಜಾರಿಯಲ್ಲೂ ತೋರುತ್ತಿದೆ. ಯೋಜನೆ ಕುರಿತು ಬಿಜೆಪಿ ನಾಯಕರ ಅನುಚಿತ ಹೇಳಿಕೆಗಳು ಸರಿಯಲ್ಲ

- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಉದ್ಯಮಿಗಳ ಸುರಕ್ಷತೆಗಿಂತ ದೇಶದ ಭದ್ರತೆ ಮುಖ್ಯ. ಹಣದ ಅವಶ್ಯಕತೆಯಿದ್ದರೆ ಕಾರ್ಪೊರೇಟ್ ವಲಯಕ್ಕೆ ಅಧಿಕ ತೆರಿಗೆ ಹಾಕಿ ಸರಿದೂಗಿಸಿಕೊಳ್ಳಬೇಕು. ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಬಾರದು

- ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT