ಆಗ್ರಾದಲ್ಲಿ ಆಮ್ಲಜನಕ ಅಣಕು ಕಾರ್ಯಾಚರಣೆಯಿಂದ ಸಾವು?: ವೈದ್ಯರ ಹೇಳಿಕೆ ವೈರಲ್

ಆಗ್ರಾ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಉತ್ತರ ಪ್ರದೇಶದ ಆಗ್ರಾದ ‘ಪರಾಸ್’ ಆಸ್ಪತ್ರೆಯಲ್ಲಿ 22 ಮಂದಿ ಕೋವಿಡ್ ಸೋಂಕಿತರು ಏಪ್ರಿಲ್‌ನಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಅಣಕು ಪ್ರದರ್ಶನದ ಭಾಗವಾಗಿ ಐದು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿದ್ದೇ ಇದಕ್ಕೆ ಕಾರಣ ಎಂದು ಆಸ್ಪತ್ರೆಯ ವೈದ್ಯರು ಹೇಳಿರುವ ವಿಡಿಯೊ ಈಗ ವೈರಲ್ ಆಗಿದೆ.
ಆದರೆ, ಜಿಲ್ಲಾಡಳಿತವು ಇದನ್ನು ನಿರಾಕರಿಸಿದ್ದು ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.
ಪರಾಸ್ ಆಸ್ಪತ್ರೆಯ ಮಾಲೀಕರೂ ಆಗಿರುವ ಡಾ. ಅರಿಂಜಯ್ ಜೈನ್ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಮುಖ್ಯಮಂತ್ರಿಯವರಿಗೂ ಈಗಿನ ಸ್ಥಿತಿಯಲ್ಲಿ ಆಮ್ಲಜನಕ ಪಡೆಯುವುದು ಸಾಧ್ಯವಿಲ್ಲ ಎಂದು ನಮಗೆ ತಿಳಿಸಿದ್ದರು. ಹೀಗಾಗಿ ನಾವು ಸೋಂಕಿತರನ್ನು ಬಿಡುಗಡೆ ಮಾಡಲು ಆರಂಭಿಸಿದೆವು. ಮೋದಿ ನಗರವು ಸೊರಗಿ ಹೋಗಿದೆ’ ಎಂದು ಜೈನ್ ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ವಿಡಿಯೊ ಏಪ್ರಿಲ್ 28ರಂದು ರೆಕಾರ್ಡ್ ಆಗಿತ್ತು ಎನ್ನಲಾಗಿದೆ.
ಓದಿ: ಆಗ್ರಾ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ರಾಹುಲ್ ಗಾಂಧಿ ಆಗ್ರಹ
#Agra : @myogioffice ji who is responsible for 22 #deaths?
Paras Hospital owner Dr Jain says that to deal with the increasing number of patients and oxygen shortage, he did a 5-minute oxygen mock drill. In such a situation, 22 patients out of 96 with serious condition died. pic.twitter.com/T1FqLKWxE5— Mohammad Sartaj Alam (@SartajAlamIndia) June 7, 2021
‘ನಾವು ಸೋಂಕಿತರ ಕುಟುಂಬದವರನ್ನು ಕರೆದು ಮಾತನಾಡಿದೆವು. ಕೆಲವರು ನಮ್ಮ ಮಾತು ಕೇಳಲು ಸಿದ್ಧರಿದ್ದರು. ಆದರೆ ಇನ್ನು ಕೆಲವರು ತೆರಳಲು ಸಿದ್ಧರಿರಲಿಲ್ಲ. ಸರಿ ನಾವು ಅಣಕು ಕಾರ್ಯಾಚರಣೆ ಮಾಡೋಣ ಎಂದೆ. ಯಾರು ಸಾಯುತ್ತಾರೆ ಮತ್ತು ಯಾರು ಬದುಕುಳಿಯುತ್ತಾರೆ ಎಂಬುದನ್ನು ನೋಡೋಣವೆಂದೆ. ಬೆಳಿಗ್ಗೆ 7 ಗಂಟೆಗೆ ನಾವು ಅಣಕು ಕಾರ್ಯಾಚರಣೆ ಮಾಡಿದೆವು. ಯಾರಿಗೂ ಗೊತ್ತಾಗಲಿಲ್ಲ. ನಂತರ ನಾವು 22 ರೋಗಿಗಳು ಮೃತಪಡುವ ಸಾಧ್ಯತೆ ಇದೆ ಎಂದು ತಿಳಿದೆವು. ಅವರ ದೇಹಗಳು ನೀಲಿಯಾಗತೊಡಗಿದವು’ ಎಂದು ವೈದ್ಯರು ಹೇಳಿರುವುದು ವಿಡಿಯೊದಲ್ಲಿದೆ.
ಜಿಲ್ಲಾಡಳಿತ ಹೇಳುವುದೇನು?
ವೈದ್ಯರ ಹೇಳಿಕೆಯದ್ದು ಎನ್ನಲಾದ ವಿಡಿಯೊ ರೆಕಾರ್ಡ್ ಆದ ದಿನ ಆಮ್ಲಜನಕ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್. ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈಗ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.
‘ಆರಂಭದಲ್ಲಿ, ಆಮ್ಲಜನಕ ಕೊರತೆ ಮತ್ತು ಲಭ್ಯತೆ ಬಗ್ಗೆ ಸ್ವಲ್ಪ ಭೀತಿ ಇತ್ತು. ಆದರೆ ನಾವು ಎಲ್ಲವನ್ನೂ 48 ಗಂಟೆಗಳಲ್ಲಿ ಬಗೆಹರಿಸಿದ್ದೇವೆ. ಆಸ್ಪತ್ರೆಯಲ್ಲಿ ಏಪ್ರಿಲ್ 26 ಮತ್ತು 27ರಂದು 7 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಐಸಿಯು ಬೆಡ್‌ಗಳೂ ಇವೆ. 22 ಸೋಂಕಿತರು ಮೃತಪಟ್ಟಿದ್ದಾರೆ ಎಂಬುದರಲ್ಲಿ ಸತ್ಯಾಂಶವಿಲ್ಲ. ಈ ಕುರಿತು ತನಿಖೆ ನಡೆಸಲಿದ್ದೇವೆ’ ಎಂದು ಸಿಂಗ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.