ವಿಮಾನದಲ್ಲಿ ಅನುಚಿತ ವರ್ತನೆ: ಏರ್ ಇಂಡಿಯಾಗೆ ಡಿಜಿಸಿಎ ಷೋಕಾಸ್ ನೋಟಿಸ್

ಮುಂಬೈ: ‘ಕಳೆದ ತಿಂಗಳು ಪ್ಯಾರಿಸ್‌ನಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಸಂಸ್ಥೆಗೆ ಷೋಕಾಸ್ ನೋಟಿಸ್ ನೀಡಲಾಗಿದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಸೋಮವಾರ ತಿಳಿಸಿದೆ.
ಎರಡೂ ಘಟನೆಗಳು 2022ರ ಡಿಸೆಂಬರ್ 6ರಂದು ಪ್ಯಾರಿಸ್–ನವದೆಹಲಿ ವಿಮಾನದಲ್ಲಿ ನಡೆದಿದ್ದವು.
‘ಅನುಚಿತ ಘಟನೆಗಳಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು’ ಎಂದು ಏರ್ ಇಂಡಿಯಾದ ವ್ಯವಸ್ಥಾಪಕರಿಗೆ ಷೋಕಾಸ್ ನೋಟಿಸ್ ನೀಡಿದ್ದು, ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂದು ಡಿಜಿಎಸಿ ಹೇಳಿದೆ.
‘ಒಂದು ಘಟನೆಯಲ್ಲಿ, ಪಾನಮತ್ತ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು ಮತ್ತು ಸಿಬ್ಬಂದಿಯ ಮಾತನ್ನು ಪಾಲಿಸಿರಲಿಲ್ಲ. ಎರಡನೇ ಘಟನೆಯಲ್ಲಿ ಪ್ರಯಾಣಿಕರೊಬ್ಬರು ತಮ್ಮ ಸಹ ಮಹಿಳಾ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ಹೋದಾಗ ಅವರ ಆಸನವನ್ನು ಅತಿಕ್ರಮಿಸಿಕೊಂಡಿದ್ದಲ್ಲದೆ ಅವರ ಕಂಬಳಿಯನ್ನೂ ತೆಗೆದುಕೊಂಡಿದ್ದರು’ ಎಂದು ಡಿಜಿಸಿಎ ಆರೋಪಿಸಿದೆ.
‘2023 ಜ. 5ರಂದು ಡಿಜಿಸಿಎ ಘಟನೆಯ ವರದಿಯನ್ನು ಕೇಳುವವರೆಗೂ ಏರ್ ಇಂಡಿಯಾವು ಈ ಘಟನೆಯನ್ನು ವರದಿ ಮಾಡಿರಲಿಲ್ಲ. ಜ. 6ರಂದು ಏರ್ ಇಂಡಿಯಾವು ಇಮೇಲ್ ಮೂಲಕ ಸಲ್ಲಿಸಿದ್ದ ಉತ್ತರವನ್ನು ಪರಿಶೀಲಿಸಿದ ಬಳಿಕ, ವಿಮಾನದಲ್ಲಿ ಅಶಿಸ್ತಿನ ನಿರ್ವಹಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸರಿಯಾಗಿ ಪಾಲಿಸಲಾಗಿಲ್ಲ ಹಾಗೂ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯೆ ನೀಡುವಲ್ಲಿ ವಿಳಂಬ ಮಾಡಿದೆ’ ಎಂದು ಡಿಜಿಸಿಎ ದೂರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.