ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ: ಏಮ್ಸ್ ಸಮಿತಿ ಹೇಳಿದ್ದೇನು?

Last Updated 21 ಆಗಸ್ಟ್ 2022, 6:40 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ಏಮ್ಸ್‌ನ ಪರಿಣತರ ತಂಡ ಹೇಳಿದೆ.

ಜಯಲಲಿತಾ ಅವರಿಗೆ ವೈದ್ಯಕೀಯ ಕ್ರಮದ ಅನುಸಾರವೇ ಚಿಕಿತ್ಸೆ ನೀಡಲಾಗಿತ್ತು ಎಂದು ಏಮ್ಸ್‌ನ ಪರಿಣತರ ತಂಡ ತಿಳಿಸಿದೆ.

ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಆರ್ಮುಗಸ್ವಾಮಿ ಆಯೋಗಕ್ಕೆ ಸಹಾಯ ಮಾಡಲು ಆರು ಸದಸ್ಯರ ಸಮಿತಿಯೊಂದನ್ನು ನವೆಂಬರ್ 30, 2021ರಂದು ರಚಿಸಲಾಗಿತ್ತು.

ಹೃದ್ರೋಗ ತಜ್ಞ ಡಾ.ಸಂದೀಪ್ ಸೇಠ್ ನೇತೃತ್ವದ ವೈದ್ಯರ ಸಮಿತಿಯು ಚೆನ್ನೈನ ಅಪೋಲೊ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ.

ಜಯಲಲಿತಾ ಅವರು ಅಪೋಲೊ ಆಸ್ಪತ್ರೆಗೆ ದಾಖಲಾಗುವ ಮೊದಲೇ ಮಧುಮೇಹ, ಎಟೊಪಿಕ್ ಡರ್ಮಟೈಟಿಸ್ (ಚರ್ಮದ ತುರಿಕೆ), ಹೈಪೋಥೈರಾಯ್ಡ್‌ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಏಮ್ಸ್ ಸಮಿತಿ ಹೇಳಿದೆ.

2016ರ ಸೆಪ್ಟೆಂಬರ್ 19ರಂದು ಜಯಲಲಿತಾ ಅವರ ಆರೋಗ್ಯ ತಪಾಸಣೆ ನಡೆಸಿದ್ದ ಡಾ. ಶಿವಕುಮಾರ್ ಅವರ ಹೇಳಿಕೆ ಉಲ್ಲೇಖಿಸಿರುವ ಏಮ್ಸ್ ಸಮಿತಿ, ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನ ದ್ರಾಕ್ಷಿ, ಕೇಕ್ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದರು ಎಂದು ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದೆ.

2016ರ ಸೆ.22ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಡಿ. 4ರಂದು ಜಯಲಲಿತಾ ಹೃದಯಾಘಾತಕ್ಕೆ ಒಳಗಾಗಿದ್ದರು. ಡಿ.5ರಂದು ಅವರು ಮೃತಪಟ್ಟಿದ್ದಾರೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT