ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

Last Updated 7 ಜನವರಿ 2023, 12:41 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾ ಎಂಬಾತನಿಗೆ ದೆಹಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

2022ರ ನವೆಂಬರ್‌ 26 ರಂದು, ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ವಿಮಾನ ಲ್ಯಾಂಡ್‌ ಆದ ನಂತರವೂ ಮಿಶ್ರಾ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಈ ಘಟನೆ ನಡೆದಿತ್ತು.

ಮಹಿಳೆ ಏರ್‌ ಇಂಡಿಯಾಗೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಈತನ ವಿರುದ್ಧ ಜನವರಿ 4ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಮಿಶ್ರಾನನ್ನು ಇಂದು (ಶನಿವಾರ) ಬಂಧಿಸಿ ದೆಹಲಿಗೆ ಕರೆತರಲಾಗಿತ್ತು.

ಪ್ರಕರಣದ ತನಿಖಾಧಿಕಾರಿ (ಐಒ) ಆರೋಪಿ ಮಿಶ್ರಾ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಆರೋಪಿಯನ್ನು ಮೂರು ದಿನ ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದಾಗ್ಯೂ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯು ಉದ್ದೇಶಪೂರ್ವಕವಾಗಿಯೇ ತನಿಖೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಿರುವಂತೆ ತೋರುತ್ತಿದೆ ಎಂದು ಹೇಳಿರುವ ನ್ಯಾಯಾಲಯ, ಇತರ ಸಾಕ್ಷೀದಾರರನ್ನು ವಿಚಾರಣೆಗೆ ಒಳಪಡಿಸಲು ಆರೋಪಿಯ ಭೌತಿಕ ಉಪಸ್ಥಿತಿ ಅಗತ್ಯವಿಲ್ಲ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯದೆಯೂ ಸಿಆರ್‌ಪಿಸಿಯ 164ನೇ ಸೆಕ್ಷನ್‌ ಅಡಿಯಲ್ಲಿ ಇತರ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಘಟನೆ ನಡೆದ ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಯು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಶುಕ್ರವಾರ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT