ಬುಧವಾರ, ಫೆಬ್ರವರಿ 1, 2023
16 °C

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಮೂವರು ಸಿಬ್ಬಂದಿ ವಿಚಾರಣೆಗೆ ಹಾಜರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ ಇಂಡಿಯಾ ವಿಮಾನದ ಮೂವರು ಸಿಬ್ಬಂದಿ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 9 ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಲಾಗಿದ್ದು, ಈ ಪೈಕಿ ಮೂವರ ಹೇಳಿಕೆಗಳನ್ನು ಶನಿವಾರ ಬೆಳಗ್ಗೆ ದಾಖಲಿಸಿಕೊಳ್ಳಲಾಗಿದೆ. ಈ ಹೇಳಿಕೆಗಳು ಕಳೆದ ನವೆಂಬರ್‌ನಲ್ಲಿ ನಡೆದ ಪ್ರಕರಣದ ತನಿಖೆಗೆ ನೆರವಾಗಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಿಬ್ಬಂದಿಯನ್ನು ಶುಕ್ರವಾರವೇ ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಅವರೆಲ್ಲ ನಗರದಲ್ಲಿ ಇರದಿದ್ದ ಕಾರಣ ಶನಿವಾರ ಹಾಜರಾಗಿದ್ದಾರೆ.

2022ರ ನವೆಂಬರ್‌ 26 ರಂದು, ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಎಂಬಾತ ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ಮಾಡಿದ್ದ. ವಿಮಾನ ಲ್ಯಾಂಡ್‌ ಆದ ನಂತರವೂ ಮಿಶ್ರಾ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಈ ಘಟನೆ ನಡೆದಿತ್ತು.

ಮಹಿಳೆ ಏರ್‌ ಇಂಡಿಯಾಗೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಈತನ ವಿರುದ್ಧ ಜನವರಿ 4ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಮಿಶ್ರಾನನ್ನು ಇಂದು (ಶನಿವಾರ) ಬಂಧಿಸಿ ದೆಹಲಿಗೆ ಕರೆತರಲಾಗಿದೆ.

ಇವನ್ನೂ ಓದಿ
    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು