ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ–ಎನ್‌ಸಿಆರ್‌ ವಾಯುಮಾಲಿನ್ಯ: ಮುಂದಿನ ಆದೇಶದವರೆಗೂ ಶಾಲಾ– ಕಾಲೇಜುಗಳು ಬಂದ್‌

Last Updated 17 ನವೆಂಬರ್ 2021, 3:02 IST
ಅಕ್ಷರ ಗಾತ್ರ

ನವದೆಹಲಿ: ವಾಯುಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ದೆಹಲಿ–ಎನ್‌ಸಿಆರ್‌ನಲ್ಲಿ ಶಾಲೆ, ಕಾಲೇಜು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡುವಂತೆ ವಾಯು ಗುಣಮಟ್ಟ ನಿರ್ವಹಣಾ ಸಮಿತಿ(ಸಿಎಕ್ಯುಎಂ) ನಿರ್ದೇಶನ ನೀಡಿದ್ದು, ಆನ್‌ಲೈನ್ ತರಗತಿಗಳಿಗೆ ಒತ್ತು ನೀಡುವಂತೆ ಸೂಚಿಸಿದೆ.

ದೆಹಲಿಯ 300 ಕಿ.ಮೀ ವ್ಯಾಪ್ತಿಯಲ್ಲಿರುವ 11 ಥರ್ಮಲ್ ವಿದ್ಯುತ್ ಸ್ಥಾವರಗಳ ಪೈಕಿ ಕೇವಲ 5 ಮಾತ್ರ ನವೆಂಬರ್ 30ರವರೆಗೆ ಕಾರ್ಯನಿರ್ವಹಿಸಲಿವ ಎಂದು ಅದು ತಿಳಿಸಿದೆ.

ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗ‌ಳಿಗೆ ನವೆಂಬರ್ 21ರವರೆಗೆ ಕಟ್ಟಡ ಕಾಮಗಾರಿ, ಕಟ್ಟಡ ತೆರವು ಕಾರ್ಯಾಚರಣೆಗಳನ್ನು ನಡೆಸದಂತೆ ಸಮಿತಿ ಸೂಚಿಸಿದೆ. ಬಸ್, ರೈಲು, ಮೆಟ್ರೋ ಮತ್ತು ಮಿಲಿಟರಿಗೆ ಸಂಬಂಧಿತ ಸಂಚಾರಗಳನ್ನು ಕಠಿಣ ನಿಯಮಾವಳಿ ಅನ್ವಯ ನಡೆಸುವಂತೆ ತಿಳಿಸಿದೆ.

ಅಗತ್ಯ ವಸ್ತುಗಳಲ್ಲದ ಸರಕು ಸಾಗಣೆ ಟ್ರಕ್‌ಗಳಿಗೆ ಭಾನುವಾರದವರೆಗೆ ದೆಹಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ವಾಯು ಮಾಲಿನ್ಯ ಹೆಚ್ಚಾಗಿರುವ ದೆಹಲಿ–ಎನ್‌ಸಿಆರ್ ವ್ಯಾಪ್ತಿಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಉನ್ನತ ಅಧಿಕಾರಿಗಳ ಜೊತೆ ಮಂಗಳವಾರ ವಾಯು ಗುಣಮಟ್ಟ ನಿರ್ವಹಣಾ ಸಮಿತಿ ಸಭೆ ನಡೆಸಿದೆ. ಈ ಮಧ್ಯೆ, ಇಂದು ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿ–ಎನ್‌ಸಿಆರ್‌ನ ವಾಯುಮಾಲಿನ್ಯ ಕುರಿತಾದ ವಿಚಾರಣೆ ನಡೆಯಲಿದೆ.

ಎನ್‌ಸಿಆರ್ ವಲಯದ ರಾಜ್ಯ ಸರ್ಕಾರಗಳ ಶೇ.50ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಮ್‌ಗೆ ಸೂಚಿಸಲು ತಿಳಿಸಲಾಗಿದೆ. ಖಾಸಗಿ ಸಂಸ್ಥೆಗಳೂ ಇದೇ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ.

ಅನುಮತಿ ಇಲ್ಲದ ತೈಲ ಬಳಕೆ ಮಾಡುತ್ತಿರುವ ಎನ್‌ಸಿಆರ್ ವಲಯದ ಕೈಗಾರಿಕೆಗಳನ್ನು ಕೂಡಲೇ ಬಂದ್ ಮಾಡಬೇಕು ಮತ್ತು 10–15 ವರ್ಷ ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳು ರಸ್ತೆಗಿಳಿಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ಸಮಿತಿಯ ಆದೇಶಗಳ ಪರಿಣಾಮಕಾರಿ ಜಾರಿ ಕುರಿತಂತೆ ನಿತ್ಯ ಮೇಲ್ವಿಚಾರಣೆ ಮಾಡುವಂತೆ ಎನ್‌ಸಿಆರ್ ಭಾಗದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದ್ದು, ಸೋಮವಾರ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.

ದೆಹಲಿಯಲ್ಲಿ ಶಾಲೆ, ಕಾಲೇಜು ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳ ಭೌತಿಕ ತರಗತಿಗಳನ್ನು ವಾರದಮಟ್ಟಿಗೆ ಬಂದ್ ಮಾಡಿ ಸೋಮವಾರ ದೆಹಲಿ ಸರ್ಕಾರ ಆದೇಶಿಸಿತ್ತು.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT